ವೆಸ್ಟ್‌ಇಂಡೀಸ್ ಸರಣಿ ಬಳಿಕ ಮಿಸ್ಬಾವುಲ್ ಹಕ್ ನಿವೃತ್ತಿ

ಕರಾಚಿ, ಎ.5: ಪಾಕಿಸ್ತಾನದ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಮಿಸ್ಬಾವುಲ್ ಹಕ್ ವೆಸ್ಟ್‌ಇಂಡೀಸ್ ಸರಣಿಯ ಬಳಿಕ ನಿವೃತ್ತಿಯಾಗಲಿದ್ದಾರೆಂದು ವರದಿಯಾಗಿದೆ.
ಈ ಸುದ್ದಿಯನ್ನು ದೃಢಪಡಿಸಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅಧ್ಯಕ್ಷ ಶಹರ್ಯಾರ್ ಖಾನ್, ವೆಸ್ಟ್‌ಇಂಡೀಸ್ ಸರಣಿಯು ಮಿಸ್ಬಾವುಲ್ ಹಕ್‌ಗೆ ಕೊನೆಯ ಟೆಸ್ಟ್ ಸರಣಿಯಾಗಿದೆ ಎಂದಿದ್ದಾರೆ.
42ರ ಹರೆಯದ ಹಕ್ ಪಾಕ್‌ನ ಓರ್ವ ಯಶಸ್ವಿ ಟೆಸ್ಟ್ ನಾಯಕನಾಗಿದ್ದರು. ಹಕ್ ನಾಯಕತ್ವದಲ್ಲಿ ಪಾಕ್ ಕಳೆದ ವರ್ಷದ ಆಗಸ್ಟ್‌ನಲ್ಲಿ ಐಸಿಸಿ ನಂ.1 ಟೆಸ್ಟ್ ತಂಡವಾಗಿ ಹೊರಹೊಮ್ಮಿತ್ತು. ಅದೇ ವರ್ಷ ಮಿಸ್ಬಾ ಹಾಗೂ ಯೂನಿಸ್‌ಖಾನ್ ಪ್ರತಿಷ್ಠಿತ ವಿಸ್ಡನ್ ವರ್ಷದ ಕ್ರಿಕೆಟ್ ಪಟ್ಟಿಗೆ ಸೇರ್ಪಡೆಯಾಗಿದ್ದರು.
ನಂ.1 ಸ್ಥಾನಕ್ಕೇರಿದ ಬಳಿಕ ಪಾಕ್ ಸತತ 6 ಟೆಸ್ಟ್ ಪಂದ್ಯಗಳಲ್ಲಿ ಸೋತಿತ್ತು. ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯದಲ್ಲಿ 0-2 ಹಾಗೂ 0-3 ಅಂತರದಿಂದ ಟೆಸ್ಟ್ ಸರಣಿ ಸೋತಿದ್ದ ಮಿಸ್ಬಾ ನಾಯಕತ್ವದ ಬಗ್ಗೆ ತೀವ್ರ ಟೀಕೆ ಕೇಳಿಬಂದಿತ್ತು.
ಈ ವರ್ಷದ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದ ಮಿಸ್ಬಾ ನಿವೃತ್ತಿಯ ಬಗ್ಗೆ ಶೀಘ್ರವೇ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದರು.





