ಕಲಾಪಗಳನ್ನು ಮೂಡುಬಿದಿರೆಯಲ್ಲಿ ನಡೆಸುವಂತೆ ಮನವಿ
ಮೂಡುಬಿದಿರೆ, ಎ.5: ಮೂಡುಬಿದಿರೆ ಹೋಬಳಿಗೆ ಸಂಬಂಧಿಸಿದ ಸಹಾಯಕ ಆಯುಕ್ತರ ವ್ಯಾಪ್ತಿಯ ಕಂದಾಯ ಪ್ರಕರಣದ ನ್ಯಾಯಾಲಯ ಕಲಾಪಗಳನ್ನು ಮೂಡುಬಿದಿರೆಯಲ್ಲಿಯೇ ನಡೆಸಿಕೊಡುವಂತೆ ಮೂಡುಬಿದಿರೆ ವಕೀಲರ ಸಂಘ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದೆ.
ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ಸಹಾಯಕ ಆಯುಕ್ತರು ನೀಡಿದ್ದಾರೆಂದು ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಬಾಹುಬಲಿ ಪ್ರಸಾದ್ ತಿಳಿಸಿದ್ದಾರೆ. ವಕೀಲರ ಸಂಘದಿಂದ 7 ತಿಂಗಳ ಹಿಂದೆ ಕಂದಾಯ ಸಚಿವರಿಗೂ ಅರ್ಜಿ ಸಲ್ಲಿಸಲಾಗಿದ್ದು, ಸಚಿವರು ಜಿಲ್ಲಾಧಿಕಾರಿಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ನಿರ್ದೇಶನ ನೀಡಿದ್ದರು. ಈ ಹಿಂದೆ ಮೂಡುಬಿದಿರೆ ಹೋಬಳಿಗೆ ಸಂಬಂಧಿಸಿದ ಸಹಾಯಕ ಆಯುಕ್ತರ ವ್ಯಾಪ್ತಿಯ ಕಂದಾಯ ವ್ಯಾಜ್ಯಗಳನ್ನು ಮೂಡುಬಿದಿರೆಯ ಪ್ರವಾಸಿ ಬಂಗಲೆಯಲ್ಲಿ ನಿಯಮಿತವಾಗಿ ನಡೆಸಲಾಗುತ್ತಿತ್ತು. ಕ್ರಮೇಣ ವ್ಯಾಜ್ಯಗಳ ಸಂಖ್ಯೆಯಲ್ಲಿ ಇಳಿಮುಖವಾದ್ದರಿಂದ ಅದನ್ನು ಮಂಗಳೂರಿನಲ್ಲೇ ನಡೆಸಲಾಗುತ್ತಿದೆ. ಇದರಿಂದಾಗಿ ಮೂಡುಬಿದಿರೆ ಹೋಬಳಿಯವರಿಗೆ ಅನನುಕೂಲವಾಗುತ್ತಿತ್ತು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ನಾಗೇಶ್.ಶೆಟ್ಟಿ ಡಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಎಸ್.ಲೋಬೋ, ಖಜಾಂಚಿ ಜಯಪ್ರಕಾಶ್ ಭಂಡಾರಿ, ಸದಸ್ಯರಾದ ಹರೀಶ್.ಪಿ, ಮನೋಜ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.





