ಟ್ರಂಪ್ ದರ್ಬಾರ್‌ನಿಂದ ಸ್ಟೀವ್ ಬೆನಾನ್ ಔಟ್!

ವಾಷಿಂಗ್ಟನ್,ಎ.6: ಮುಖ್ಯ ತಂತ್ರಗಾರ ಸ್ಟೀವ್ ಬನಾನ್ ಅವರನ್ನು ರಾಷ್ಟ್ರೀಯ ಭದ್ರತಾ ಮಂಡಳಿಯಿಂದ ಕಿತ್ತುಹಾಕುವ ಮೂಲಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಪ್ರಹಾರ ನಡೆಸಿದ್ದಾರೆ. ಬೆನಾನ್ ಅವರಿಗೆ ಉನ್ನತ ಮಟ್ಟದ ಸಭೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡುವ ವಿವಾದಾತ್ಮಕ ಆದೇಶವನ್ನು ಹೊರಡಿಸಿದ ಕೆಲವೇ ದಿನಗಳಲ್ಲಿ ಈ ಪದಚ್ಯುತಿ ಆದೇಶ ಅಚ್ಚರಿ ಮೂಡಿಸಿದೆ.
ಫೆಡರಲ್ ರಿಜಿಸ್ಟ್ರಾರ್‌ನಲ್ಲಿ ಪುನರ್ರಚಿತ ಭದ್ರತಾ ಮಂಡಳಿಯನ್ನು ಪ್ರಕಟಿಸಲಾಗಿದ್ದು, ಮುಖ್ಯ ತಂತ್ರಗಾರ ಬೆನಾನ್ ಅವರ ಹೆಸರನ್ನು ಒಳಗೊಂಡಿಲ್ಲ. ಈ ಪ್ರಧಾನ ಸಮಿತಿಯು ಅತ್ಯುನ್ನತ ಅಧಿಕಾರಿಗಳನ್ನು ಒಳಗೊಂಡಿದ್ದು, ರಾಷ್ಟ್ರೀಯ ಭದ್ರತಾ ಆದ್ಯತೆಗಳ ಬಗ್ಗೆ ಚರ್ಚಿಸಿ ಶಿಫಾರಸ್ಸು ಮಾಡುವ ಅಧಿಕಾರ ಹೊಂದಿದೆ.
ಟ್ರಂಪ್ ಅವರಿಗೆ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಹಾಗೂ ಭಯೋತ್ಪಾದನಾ ನಿಗ್ರಹ ವಿಷಯದ ಸಹಾಯಕರಾಗಿದ್ದ ಟಾಮ್ ಬೊಸರ್ಟ್ ಅವರ ಅಧಿಕಾರವನ್ನು ಕೂಡಾ ಮೊಟಕುಗೊಳಿಸಲಾಗಿದೆ.
ಅಧ್ಯಕ್ಷರ ವಿಷನ್ ಅನುಷ್ಠಾನಗೊಳಿಸುವ ಸಲುವಾಗಿ ಆರಂಭಿಕ ಹಂತದಲ್ಲಿ ಬೆನಾನ್ ಅವರನ್ನು ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಸೇರಿಸಲಾಗಿತ್ತು ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಪ್ರಕಟಿಸಿದ್ದಾರೆ.
ಟ್ರಂಪ್ ಅವರ ಮೊದಲ ರಾಷ್ಟ್ರೀಯ ಭದ್ರತಾ ಸಲಹೆಎಗಾರ ಮೈಕೆಲ್ ಫ್ಲಿನ್ ಆಗ ಎನ್‌ಎಸ್‌ಸಿ ಜವಾಬ್ದಾರಿ ಹೊಂದಿದ್ದರು. ಆದರೆ ಬೆನಾನ್ ಅವರ ಪಾತ್ರ ಯಾವುದೇ ರೀತಿಯಲ್ಲಿ ಫ್ಲಿನ್ ಪಾತ್ರಕ್ಕೆ ಅಡ್ಡಿಯಾಗುವಂತಿರಲಿಲ್ಲ. ಆದರೆ ರಷ್ಯಾ ಅಧಿಕಾರಿಗಳ ಜತೆ ಸಂಪರ್ಕ ಸಾಧಿಸಿ ಆಡಳಿತಯಂತ್ರವನ್ನು ದಾರಿತಪ್ಪಿಸಿದ ಕಾರಣಕ್ಕಾಗಿ ಫ್ಲಿನ್ ರಾಜೀನಾಮೆ ನೀಡುವಂತೆ ಸೂಚಿಸಲಾಗಿತ್ತು. ಇದಕ್ಕೂ ಮುನ್ನ ಬೆನಾನ್ ಅವರನ್ನು ಭದ್ರತಾ ಮಂಡಳಿಗೆ ಸೇರಿಸಿರುವ ಟ್ರಂಪ್ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಬೆನಾನ್ ಈ ಹುದ್ದಗೆ ಅನರ್ಹರು ಎಂಬ ವಾದ ಕೇಳಿಬಂದಿತ್ತು.







