ಗೋರಕ್ಷಕರ ಕೃತ್ಯ ಸಮರ್ಥಿಸಿಕೊಂಡ ರಾಜಸ್ಥಾನ ಸಚಿವ!

ಅಲ್ವಾರ್, ಎ. 6: ದನ ಕಳ್ಳಸಾಗಾಣಿಕೆದಾರ ಎಂಬ ಅನುಮಾನದಿಂದ ಗೋರಕ್ಷಕರು ರೈತನೊಬ್ಬನನ್ನು ಹೊಡೆದು ಕೊಂದ ಘಟನೆ ರಾಜಸ್ಥಾನದಲ್ಲಿ ವಿವಾದದ ಕಿಚ್ಚು ಹಬ್ಬಿಸಿದ್ದು, ಗೋರಕ್ಷಕರ ಕ್ರಮವನ್ನು ಸಮರ್ಥಿಸಿಕೊಳ್ಳುವ ಮೂಲಕ ಅಲ್ಲಿನ ಸಚಿವರೊಬ್ಬರು ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಗೋರಕ್ಷಕರ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಿ, ಮೂವರನ್ನು ಬಂಧಿಸಲಾಗಿದೆ. ಆದರೆ ರಾಜಸ್ಥಾನ ಗೃಹಸಚಿವ ಗುಲಾಬ್‌ಚಂದ್ ಕಟಾರಿಯಾ ಅವರು "ಗೋರಕ್ಷಕರು ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಆದರೆ ಕಾನೂನು ಉಲ್ಲಂಘಿಸಿ ಜನರನ್ನು ಹೊಡೆದಿದ್ದಾರೆ" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಗೋರಕ್ಷಕರು 15 ಮಂದಿಯ ಮೇಲೆ ಹಲ್ಲೆ ನಡೆಸಿದ್ದು, ಈ ಪೈಕಿ ಒಬ್ಬ ವ್ಯಕ್ತಿ ಸೋಮವಾರ ರಾತ್ರಿ ಮೃತಪಟ್ಟಿದ್ದರು.
"ಗೋರಕ್ಷಕರು ಕಳ್ಳಸಾಗಾಣಿಕೆದಾರರಿಂದ ಹಸುವನ್ನು ರಕ್ಷಿಸುವ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಜನರನ್ನು ಭೀಕರವಾಗಿ ಥಳಿಸಿ ಕಾನೂನು ಉಲ್ಲಂಘಿಸಿದ್ದಾರೆ" ಎಂದು ಸಚಿವರು ಹೇಳಿರುವುದನ್ನು ಎಎಎನ್‌ಐ ಪ್ರಸಾರ ಮಾಡಿದೆ. ಇದರಿಂದ ವಿವಾದ ಸೃಷ್ಟಿಯಾಗುತ್ತಿದ್ದಂತೆ ಸಚಿವರು ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ್ದಾರೆ.
ಕಳೆದ ತಿಂಗಳು ಇದೇ ಸಚಿವ ಬಾಲಕಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಅಸಂಬದ್ಧ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ನೀಡಿತ್ತು.





