ಧೂಮಪಾನದಿಂದ ಭಾರತದಲ್ಲಿ ಸಾಯುತ್ತಿರುವವರೆಷ್ಟು ಗೊತ್ತೇ?

ಹೊಸದಿಲ್ಲಿ ಎ. 6 : ವಿಶ್ವದಲ್ಲಿ ಸಾಯುವ ಹತ್ತು ಮಂದಿಯ ಪೈಕಿ ಒಬ್ಬರ ಸಾವಿಗೆ ಧೂಮಪಾನ ಕಾರಣವಾಗುತ್ತಿದೆ. ಅಂದರೆ ವರ್ಷಕ್ಕೆ ಸುಮಾರು 64 ಲಕ್ಷ ಮಂದಿ ಧೂಮಪಾನದಿಂದಾಗಿ ಸಾಯುತ್ತಿದ್ದು, ಈ ಪೈಕಿ ಶೇಕಡ 50ರಷ್ಟು ಮಂದಿ ಚೀನಾ, ಭಾರತ, ಅಮೆರಿಕ ಹಾಗೂ ರಷ್ಯಾದವರು ಎನ್ನುವ ಆತಂಕಕಾರಿ ಅಂಕಿ ಅಂಶ ಇದೀಗ ಬೆಳಕಿಗೆ ಬಂದಿದೆ.
ಲ್ಯಾನ್ಸೆಟ್ ನಿಯತಕಾಲಿಕ ಪ್ರಕಟಿಸಿದ ಜಾಗತಿಕ ರೋಗದ ಹೊರೆ ಕುರಿತ ವರದಿಯಲ್ಲಿ ಈ ಅಂಕಿ ಅಂಶ ಬಹಿರಂಗವಾಗಿದೆ. ಧೂಮಪಾನದಿಂದ ಸಾಯುವವರ ಸಂಖ್ಯೆಯಲ್ಲಿ ವಿಶ್ವದ ಅಗ್ರ ಹತ್ತು ದೇಶಗಳಲ್ಲಿ ಭಾರತ ಸ್ಥಾನ ಪಡದಿದ್ದು, ವಿಶ್ವದಲ್ಲಿ ಧೂಮಪಾನದಿಂದ ಸಾಯುವವರ ಪೈಕಿ ಶೇಕಡ 63.6ರಷ್ಟು ಮಂದಿ ಈ ಹತ್ತು ದೇಶಗಳಲ್ಲಿ ಸಾಯಯುತ್ತಿದ್ದಾರೆ.
1990ರಿಂದ 2015ರವರೆಗೆ ವಿಶ್ವದ 195 ದೇಶಗಳಲ್ಲಿ ಧೂಮಪಾನ ಹವ್ಯಾಸವನ್ನು ಅಧ್ಯಯನ ಮಾಡಲಾಗಿದೆ. ದೇಶಗಳು ತಂಬಾಕು ಬಳಕೆ ಕಡಿಮೆ ಮಾಡಲು ಪ್ರಯತ್ನಗಳನ್ನು ನಡಸುತ್ತಿದ್ದರೂ, ಧೂಮಪಾನ ದೊಡ್ಡ ಸಂಖ್ಯೆಯ ಜನರ ಸಾವು ಹಾಗೂ ಅಂಗವೈಕಲ್ಯಕ್ಕೆ ಕಾರಣವಾಗುತ್ತಿದೆ. ಈ ಚಟ ನಿಯಂತ್ರಿಸಲು ಆಡಳಿತಯಂತ್ರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದು ಅಧ್ಯಯನ ವರದಿ ಸಲಹೆ ಮಾಡಿದೆ.
ಧೂಮಪಾನದಿಂದ ಆರೋಗ್ಯದ ಮೇಲೆ ದೊಡ್ಡ ದುಷ್ಪರಿಣಾಮ ಇದ್ದರೂ, ವಿಶ್ವದಲ್ಲಿ ಪ್ರತಿ ನಾಲ್ಕು ಮಂದಿಯ ಪೈಕಿ ಒಬ್ಬರು ದಿನನಿತ್ಯ ಧೂಮಪಾನ ಮಾಡುತ್ತಾರೆ ಎಂದು ಅಧ್ಯಯನ ತಂಡದ ಮುಖ್ಯಸ್ಥ ಡಾ.ಇಮ್ಯಾನ್ಯುಯೆಲಾ ಗಕಿಡೊ ಹೇಳಿದ್ದಾರೆ.
ಭಾರತದಲ್ಲಿ ಪ್ರತಿದಿನ ಸುಮಾರು 5500 ಮಂದಿ ಯುವಕರು ಧೂಮಪಾನಿಗಳಾಗುತ್ತಿದ್ದಾರೆ. ದೇಶದಲ್ಲಿ ಶೇಕಡ 35ರಷ್ಟು ವಯಸ್ಕರು ಧೂಮಪಾನ ಮಾಡುತ್ತಿದ್ದಾರೆ. ದೇಶದಲ್ಲಿ ಶೇಕಡ 25ರಷ್ಟು ಮಹಿಳೆಯರು ಕೂಡಾ 15ನೇ ವಯಸ್ಸಿಗೆ ಮುನ್ನವೇ ಧೂಮಪಾನ ಆರಂಭಿಸುತ್ತಿದ್ದಾರೆ ಎನ್ನುವುದನ್ನು ವರದಿ ವಿವರಿಸಿದೆ.





