ದುಬಾರಿ ನ್ಯಾಯ ! : ಪ್ರತಿ ಬಾರಿಗೆ ಲಕ್ಷ, ಲಕ್ಷ ಎಣಿಸಬೇಕು ಈ ನ್ಯಾಯವಾದಿಗಳಿಗೆ
ಹೊಸದಿಲ್ಲಿ,ಎ.6 : ಇವರೆಲ್ಲರೂ ದೇಶದ ಖ್ಯಾತ ನ್ಯಾಯವಾದಿಗಳು. ಆದರೆ ಪ್ರತಿಯೊಂದು ಕೇಸಿಗೂ ಈ ನ್ಯಾಯವಾದಿಗಳು ವಿಧಿಸುವ ಫೀಸು ಮಾತ್ರ ಲಕ್ಷ ಲಕ್ಷ. ಇವರ ಮೂಲಕ ನ್ಯಾಯಕ್ಕೆ ಹೋರಾಡುವುದಂತೂ ಬಹಳಷ್ಟು ದುಬಾರಿಯೇ ಸರಿ. ಇಲ್ಲಿವೆ ಇಂತಹ ಕೆಲವು ನ್ಯಾಯವಾದಿಗಳು ಹಾಗೂ ಅವರು ವಿಧಿಸುವ ಶುಲ್ಕದ ಮಾಹಿತಿ.
ರಾಮ್ ಜೇಠ್ಮಲಾನಿ :

ಇವರ ಶುಲ್ಕ - ರೂ 25 ಲಕ್ಷ. ಇವರು ನಮ್ಮ ಈ ಪಟ್ಟಿಯಲ್ಲಿರುವ ಅತ್ಯಂತ ಹಿರಿಯ ವಕೀಲರು. ಇವರ ವಯಸ್ಸು 90. ಅವರು ವಿಧಿಸುವ ಶುಲ್ಕ ಕೂಡ ಅವರನ್ನು ಅತ್ಯಂತ ದುಬಾರಿ ನ್ಯಾಯವಾದಿಯನ್ನಾಗಿಸುತ್ತದೆ. ಇವರು ಮಾಜಿ ಕೇಂದ್ರ ಸಚಿವರೂ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷರೂ ಹೌದು. ಇವರು ಹೆಚ್ಚಾಗಿ ಕ್ರಿಮಿನಲ್ ಪ್ರಕರಣಗಳನ್ನು ಕೈಗೆತ್ತಿಕೊಳ್ಳುತ್ತಾರೆ.
ಫಾಲಿ ನಾರಿಮನ್ :

ಶುಲ್ಕ - ರೂ 8 ಲಕ್ಷದಿಂದ 15 ಲಕ್ಷದ ತನಕ . ಇವರು ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿ ವಿಜೇತರು. ಅಂತಾರಾಷ್ಟ್ರೀಯ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಖ್ಯಾತಿವೆತ್ತ ಸಾಲಿಸಿಟರ್ ಇವರು.
ಕೆ ಕೆ ವೇಣುಗೋಪಾಲ್ :

ಶುಲ್ಕ -ರೂ 5 ಲಕ್ಷದಿಂದ ರೂ 7.5 ಲಕ್ಷ. ಭಾರತದ ಅತಿಗಣ್ಯ ವಕೀಲರುಗಳಲ್ಲಿ ಇವರೊಬ್ಬರು. ಭೂತಾನ್ ಸರಕಾರ ತನ್ನ ಸಂವಿಧಾನದ ಕರಡು ತಯಾರಿಸುವ ಪ್ರಕ್ರಿಯೆಯಲ್ಲಿ ಇವರ ಸಲಹೆ ಪಡೆದಿತ್ತು. ಇವರು ಕೂಡ ಪದ್ಮಭೂಷಣ, ಪದ್ಮ ವಿಭೂಷಣ ಪ್ರಶಸ್ತಿ ವಿಜೇತರು.
ಗೋಪಾಲ ಸುಬ್ರಹ್ಮಣ್ಯಂ :

ಶುಲ್ಕ- ರೂ 5.5 ಲಕ್ಷದಿಂದ ರೂ 15 ಲಕ್ಷ. ಹಿರಿಯ ನ್ಯಾಯವಾದಿಯಾಗಿರುವ ಇವರು ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟಿನ ವಕೀಲರಾಗಿದ್ದಾರೆ. 2009-2011 ಅವಧಿಯಲ್ಲಿ ಸಾಲಿಸಿಟರ್ ಜನರಲ್ ಆಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷರೂ ಆಗಿದ್ದಾರೆ ಗೋಪಾಲ ಸುಬ್ರಹ್ಮಣ್ಯಂ.
ಪಿ ಚಿದಂಬರಂ :

ಶುಲ್ಕ -ರೂ 6ರಿಂದ 7 ಲಕ್ಷ. ಮಾಜಿ ವಿತ್ತ ಸಚಿವರಾಗಿರುವ ಚಿದಂಬರಂ ಅವರು ಕಾರ್ಪೊರೇಟ್ ವಕೀಲರಾಗಿದ್ದು ಸುಪ್ರೀಂ ಕೋರ್ಟ್ ಮತ್ತು ಇತರ ಹೈಕೋರ್ಟುಗಳ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.
ಹರೀಶ್ ಸಾಲ್ವೆ :

ಶುಲ್ಕ - ರೂ 6 ರಿಂದ 15 ಲಕ್ಷ. ಇವರು 9 ವರ್ಷಗಳ ಕಾಲ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ. ರಿಲಯನ್ಸ್, ಟಾಟಾ, ಐಟಿಸಿ ಹಾಗೂ ವೊಡಾಫೋನ್ ಕಂಪೆನಿಗಳ ಕಾನೂನು ಪ್ರಕರಣಗಳನ್ನು ಇವರು ನಿರ್ವಹಿಸಿದ್ದಾರೆ.
ಅಭಿಷೇಕ್ ಮನು ಸಿಂಘ್ವಿ :

ಶುಲ್ಕ- ರೂ 6ರಿಂದ 11 ಲಕ್ಷ. ತಮ್ಮ 37ನೇ ವಯಸ್ಸಿನಲ್ಲಿ ಅತ್ಯಂತ ಕಿರಿಯ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದ ಸಿಂಘ್ವಿ ಕಾಂಗ್ರೆಸ್ ನಾಯಕರೂ ಹೌದು.
ಸಿ ಆರ್ಯ ಸುಂದರಂ :
ಶುಲ್ಕ -ರೂ 5.5ರಿಂದ 16.5 ಲಕ್ಷ. ಹಿರಿಯ ವಕೀಲರಾಗಿರುವ ಇವರು ಬಿಸಿಸಿಐ, ಅನಿಲ್ ಅಂಬಾನಿ ಮತ್ತು ಇತರ ಗಣ್ಯ ವ್ಯಕ್ತಿಗಳ ಪರವಾಗಿ ಕಾನೂನು ಹೋರಾಟ ನಡೆಸಿದವರು.
ಸಲ್ಮಾನ್ ಖುರ್ಷಿದ್ :

ಶುಲ್ಕ -ರೂ 5 ಲಕ್ಷ.ಹಿರಿಯ ವಕೀಲರೂ ಕಾನೂನು ಶಿಕ್ಷಕರೂ ಆಗಿರುವ ಇವರು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದರು.
ಕೆ ಟಿ ಎಸ್ ತುಲ್ಸಿ :

ಶುಲ್ಕ- ರೂ 5 ಲಕ್ಷ. ಸುಪ್ರೀಂ ಕೋರ್ಟಿನ ಖ್ಯಾತಿವೆತ್ತ ಹಿರಿಯ ವಕೀಲರಾಗಿರುವ ತುಲ್ಸಿ ಅವರು ರಾಬರ್ಟ್ ವಾದ್ರಾ ಅವರ ವಕೀಲರಾಗಿದ್ದರಲ್ಲದೆ 1994ರಿಂದ ಕ್ರಿಮಿನಲ್ ಜಸ್ಟಿಸ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷರೂ ಆಗಿದ್ದಾರೆ.







