ಖುರೇಷಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲು ನ್ಯಾಯಾಲಯ ಆದೇಶ
ರೋಗಿಯ ಆರೋಗ್ಯ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡುತ್ತಿರಬೇಕು:ಪ್ರಕರಣದ ತನಿಖಾಧಿಕಾರಿಗೆ ಕೋರ್ಟ್ ಆದೇಶ

ಪ್ರತಿಭಟನಾಕಾರರನ್ನು ಬಂಧಿಸುತ್ತಿರುವ ಪೋಲಿಸರು
ಮಂಗಳೂರು, ಎ.6: ಪೊಲೀಸರಿಂದ ದೌರ್ಜನ್ಯಕ್ಕೀಡಾಗಿ ಜಿಲ್ಲಾ ವೆನ್ಲಾಕ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಹ್ಮದ್ ಖುರೇಷಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲು ಇಲ್ಲಿನ ಎರಡನೆ ಜೆಎಂಎಫ್ಸಿ ನ್ಯಾಯಾಲಯ ಗುರುವಾರ ಬೆಳಗ್ಗೆ ಆದೇಶಿಸಿದೆ.
ಮಾ.21ರಂದು ಸಿಸಿಬಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಅಹ್ಮದ್ ಖುರೇಷಿಯ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದರಿಂದ ಆತನ ಕಿಡ್ನಿ ವೈಫಲ್ಯಗೊಂಡು ಆರೋಗ್ಯದಲ್ಲಿ ಏರುಪೇರಾಗಿತ್ತು. ಈ ಹಿನ್ನೆಲೆಯಲ್ಲಿ ಆತನ ಸದ್ಯದ ಸ್ಥಿತಿಗೆ ನಗರದ ವೆನ್ಲಾಕ್ನಲ್ಲಿ ಸೌಲಭ್ಯಗಳು ಹಾಗೂ ವೈದ್ಯರು ಲಭ್ಯ ಇಲ್ಲದಿರುವುದರಿಂದ ಖಾಸಗಿ ಆಸ್ಪತ್ರೆಗೆ ಅನುವು ಮಾಡಿಕೊಂಡಬೇಕೆಂದು ಖುರೇಶಿ ಪರ ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ಇದನ್ನು ಪುರಸ್ಕರಿಸಿ ನ್ಯಾಯಾಧೀಶ ಕುಂದರ್ ಅವರು ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಆದೇಶ ನೀಡಿದ್ದಾರೆ. ಅಲ್ಲದೆ, ಪ್ರಕರಣದ ತನಿಖಾಧಿಕಾರಿಯವರು ಖುರೇಶಿಯ ಭದ್ರತೆ ಸುರಕ್ಷೆ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಖುರೇಶಿಯವರ ಆರೋಗ್ಯದ ಬಗ್ಗೆ ಸಂದರ್ಭಾನುಸಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.





