ಬೀಫ್ ಚರ್ಚೆ : ತನ್ನದೇ ಹೊಸ ಕಾನೂನು ಹೇರಲು ಹೊರಟ ವಿಹಿಂಪ ನಾಯಕನನ್ನು ಷೋ ನಿಂದ ಹೊರಗಟ್ಟಿದ ಟಿವಿ ಪತ್ರಕರ್ತ
.jpg)
ಹೊಸದಿಲ್ಲಿ, ಎ. 6 : ಉತ್ತರ ಪ್ರದೇಶ ಸರಕಾರವು ಅಕ್ರಮ ಕಸಾಯಿಖಾನೆಗಳು ಮತ್ತು ಮಾಂಸದಂಗಡಿಗಳ ಮೇಲೆ ದಾಳಿ ನಡೆಸಲಾರಂಭಿಸಿದಂದಿನಿಂದ ಈ ವಿಚಾರ ದೇಶದಾದ್ಯಂತ ಗಂಭೀರ ಚರ್ಚೆಗೆ ಆಸ್ಪದ ನೀಡಿದೆ. ರಾಷ್ಟ್ರೀಯ ಟಿವಿ ವಾಹಿನಿಗಳೂ ಚರ್ಚೆಗಳಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಇಂತಹ ಒಂದು ಚರ್ಚೆ ಸಿಎನ್‌ಎನ್ -ನ್ಯೂಸ್ 18 ವಾಹಿನಿಯಲ್ಲಿ ಬುಧವಾರ ಸಂಜೆ ನಡೆಯುತ್ತಿದ್ದಾಗ, ಚರ್ಚೆಯಲ್ಲಿ ಪಾಲ್ಗೊಂಡ ವಿಹಿಂಪ ನಾಯಕರೊಬ್ಬರ ಉತ್ತರದಿಂದ ಕೆಂಡಾಮಂಡಲವಾದ ಕಾರ್ಯಕ್ರಮ ಆಂಕರ್ ಝಕ್ಕಾ ಜೇಕಬ್ ಅವರು ಆ ನಾಯಕನನ್ನು ಗೆಟ್ ಔಟ್ ಎಂದು ಹೇಳಿ ಷೋ ದಿಂದ ಹೊರಗಟ್ಟಿದ ಘಟನೆ ನಡೆದಿದೆ.
ಈ ಚರ್ಚೆ ಕಾರ್ಯಕ್ರಮದಲ್ಲಿ ವಿಹಿಂಪ, ಹಮ್ ಹಿಂದು ಸಂಘಟನೆ, ಬಿಜೆಪಿ ಮತ್ತು ಕಾಂಗ್ರೆಸ್ ಪ್ರತಿನಿಧಿಗಳು ಭಾಗವಹಿಸಿದ್ದರು. ಗೋಮಾಂಸ ಮಾರಾಟ ಮಾಡಲಾಗುತ್ತಿದೆಯೆಂಬ ಸಂಶಯದ ಮೇಲೆ ಅಂಗಡಿಯೊಂದನ್ನು ಮುಚ್ಚಿದ ಪ್ರಕರಣದ ಬಗ್ಗೆ ಉಲ್ಲೇಖಿಸುತ್ತಾ ಅಂಗಡಿಯಾತ ತಾನು ಕೋಳಿ ಮಾಂಸ ಮಾತ್ರ ಮಾರಾಟ ಮಾಡುತ್ತಿರುವುದಾಗಿ ಹೇಳಿದ ಹೊರತಾಗಿಯೂ ಅಲ್ಲಿಗೆ ಆಹಾರ ಪರೀಕ್ಷಕ ಅವರನ್ನು ಕರೆಸಿ ತಪಾಸಣೆ ನಡೆಸಿಲ್ಲವೇಕೆ ಎಂದು ನಿರೂಪಕ ಜೇಕಬ್ ಪ್ರಶ್ನಿಸಿದ್ದರು. ಆಗ ವಿಹಿಂಪದ ವಿಜಯ ಶಂಕರ್ ತಿವಾರಿ ‘‘ಯಾವ ಕಳ್ಳನೂ ತಾನು ಕಳ್ಳನೆಂದು ಹೇಳಿಕೊಳ್ಳುವುದಿಲ್ಲ. ತನಿಖೆ ನಡೆಯಲಿ,’’ ಎಂದು ಹೇಳಿದರು.
ಆಗ ಜೇಕಬ್ ‘‘ಹಾಗಾದರೆ ತನಿಖೆ ನಡೆಯುವ ಮುನ್ನವೇ ಆತ ತಪ್ಪಿತಸ್ಥ ಎಂದು ನೀವು ತೀರ್ಮಾನಿಸಿದ್ದೀರಾ?’’ ಎಂದು ಕೇಳಿ ಬಿಟ್ಟಾಗ ಹಮ್ ಹಿಂದು ಸಂಘಟನೆಯ ಅಜಯ್ ಗೌತಮ ‘‘ಆತ ಶಂಕಿತ’’ ಎಂದರು. ಆಗ ವಿಹಿಂಪ ಪ್ರತಿನಿಧಿ ಜೇಕಬ್ ಅವರನ್ನುದ್ದೇಶಿಸಿ ‘‘ಹಿಂದಿಯಲ್ಲಿ ಮಾತನಾಡಿ’’ಎಂದು ಹೇಳಲು ಪ್ರಾರಂಭಿಸಿದರು. ಆಗ ಸಿಟ್ಟುಗೊಂಡ ಜೇಕಬ್ ‘ಅರೆ ಭಾಯಿ ಸಾಬ್, ಆರೋಪ ಸಾಬೀತಾಗುವ ತನಕ ನೀವು ಅಪರಾಧಿಯಲ್ಲ. ನೀವು ನನಗೆ ಕಾನೂನು ಕಲಿಸಬೇಕಿಲ್ಲ’’ ಎಂದು ಬಿಟ್ಟರು. ಇದರಿಂದ ಕೆಂಡಾಮಂಡಲವಾದ ತಿವಾರಿ ‘‘ ವಾಟ್ ನಾನ್ಸೆನ್ಸ್’’ ಎನ್ನುತ್ತಾ ಎದ್ದಾಗ ‘‘ ನನ್ನ ಷೋದಿಂದ ಹೊರನಡೆಯಿರಿ,’’ ಎಂದು ಜೇಕಬ್ ಏರಿದ ದನಿಯಲ್ಲಿ ಹೇಳಿದರು.
ಈ ವೀಡಿಯೋ ಇದೀಗ ವೈರಲ್ ಆಗಿ ಬಿಟ್ಟಿದೆ.







