ಗೋ ರಕ್ಷಣೆಯ ಹೆಸರಲ್ಲಿ ಹೈನು ಕೃಷಿಕನನ್ನು ಕೊಂದ ಗೋರಕ್ಷಕರು !
ಹೆಚ್ಚು ಹಾಲು ಕೊಡುವ ದನ ಖರೀದಿಸಿದ್ದ ಪೆಹಲು ಖಾನ್

ಮೇವತ್,ಎ.6 : ಕಳೆದ ಶನಿವಾರ ಗೋರಕ್ಷಕರಿಂದ ಹಲ್ಲೆಗೊಳಗಾಗಿ ಸೋಮವಾರ ಮೃತಪಟ್ಟ ಮೇವತ್ ಜಿಲ್ಲೆಯ ಜೈಸಿಂಘಪುರ ಗ್ರಾಮದ ನುಹ್ ತೆಹ್ಸಿಲ್ ನಿವಾಸಿ, ಪೆಹ್ಲು ಖಾನ್ (55) ಒಬ್ಬ ಹೈನು ಕೃಷಿಕನಾಗಿದ್ದನಲ್ಲದೆ ಗೋ ಅಕ್ರಮ ಸಾಗಾಟಗಾರನಾಗಿರಲಿಲ್ಲವೆಂದು ಹೇಳಲಾಗಿದೆ. ಕಳೆದ ಶುಕ್ರವಾರ ತನ್ನ ಮನೆಯಿಂದ ಜೈಪುರಕ್ಕೆ ಹಾಲು ನೀಡುವ ಎಮ್ಮೆ ಖರೀದಿಸಲು ಹೋಗಿದ್ದ ಖಾನ್ ಅಲ್ಲಿದ್ದ ದನವೊಂದು ದಿನಕ್ಕೆ 12 ಲೀಟರ್ ಹಾಲು ನೀಡುವುದನ್ನು ಕಣ್ಣಾರೆ ನೋಡಿ ಎಮ್ಮೆಯ ಬದಲು ದನವನ್ನು ಖರೀದಿಸಿದ್ದರು. ಆದರೆ ಈ ನಿರ್ಧಾರ ಆತನ ಪ್ರಾಣಕ್ಕೇ ಮುಳುವಾಗಿ ಹೋಗಿತ್ತೆಂದು ಪೆಹ್ಲು ಖಾನ್ ಪುತ್ರ ಇರ್ಷಾದ್ (24) ಹೇಳುತ್ತಾನೆ.
ಶನಿವಾರ ಸಂಜೆ ಪೆಹ್ಲು ಖಾನ್ ಮೇಲೆ ಗೋರಕ್ಷಕರು ರಾಷ್ಟ್ರೀಯ ಹೆದ್ದಾರಿ 8ರ ಆಲ್ವಾರ್ ಎಂಬಲ್ಲಿ ದಾಳಿ ನಡೆಸಿದ್ದಾಗ ಇರ್ಷಾದ್ ಹಾಗೂ ಆತನ ಸಹೋದರ ಆರಿಫ್ ಕೂಡ ಜತೆಗಿದ್ದರು. ಪೆಹ್ಲು ಖಾನ್ ಈ ದಾಳಿಯಿಂದ ತೀವ್ರ ಗಾಯಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಾವನ್ನಪ್ಪಿದ್ದ.
ರಾಜಸ್ಥಾನ ನಂಬರ್ ಪ್ಲೇಟ್ ಹೊಂದಿದ್ದ ಪಿಕಪ್ ಟ್ರಕ್ಕಿನಲ್ಲಿ ತಂದೆ ತಮ್ಮದೇ ಗ್ರಾಮದ ಅಜ್ಮತ್ ಎಂಬವರೊಂದಿಗಿದ್ದರು ಹಾಗೂ ಆ ಟ್ರಕ್ಕಿನಲ್ಲಿ ಎರಡು ದನಗಳು ಹಾಗೂ ಕರುಗಳಿದ್ದವು. ಇನ್ನೊಂದು ವಾಹನದಲ್ಲಿ ಇರ್ಷಾದ್ ಹಾಗೂ ಇನ್ನೊಬ್ಬರು ಇದ್ದರೆ ಅದರಲ್ಲಿ ಮೂರು ದನಗಳು ಮತ್ತು ಕರುಗಳಿದ್ದವು. ತಮ್ಮನ್ನು ವಾಹನದಿಂದ ಹೊರಗೆಳೆದು ಕೋಲುಗಳು ಮತ್ತು ಬೆಲ್ಟುಗಳಿಂದ ಹಲ್ಲೆ ನಡೆಸಲಾಯಿತು, ಪೊಲೀಸರು ಅರ್ಧ ಗಂಟೆಯ ನಂತರ ಸ್ಥಳಕ್ಕಾಗಮಿಸಿದ್ದರು ಎಂದು ಇರ್ಷಾದ್ ಹೇಳುತ್ತಾನೆ. ತಮ್ಮ ಬಳಿ ದನಗಳನ್ನು ಖರೀದಿಸಿದ ರಶೀದಿಯೂ ಇರುವುದಾಗಿ ಆತ ತೋರಿಸುತ್ತಾನೆ. ಅದರಲ್ಲಿ ಜೈಪುರ ಮುನಿಸಿಪಲ್ ಕಾರ್ಪೊರೇಶನ್ನಿನ ಮುದ್ರೆಯೂ ಇದೆ. ದನಗಳನ್ನು ರೂ 45,000 ಕೊಟ್ಟು ಖರೀದಿಸಲಾಗಿತ್ತು ಎನ್ನುತ್ತಾನೆ ಆತ. ದಾಳಿಕೋರರು ತಮ್ಮ ಪರ್ಸ್ ಮತ್ತು ಮೊಬೈಲ್ ಫೋನುಗಳನ್ನೂ ಎಗರಿಸಿದ್ದಾರೆ ಎಂದು ಆತ ಆರೋಪಿಸುತ್ತಾನೆ.
ಪೊಲೀಸರು ಆರೋಪಿಗಳನ್ನು ಇನ್ನಷ್ಟೇ ಬಂಧಿಸಬೇಕಿದೆ.