"ನೀವು ನರೇಂದ್ರ ಮೋದಿ ಅಲ್ಲವಲ್ಲ "ಎಂದು ಏರ್ ಇಂಡಿಯಾ ಸಿಬ್ಬಂದಿ ನನಗೆ ಹೇಳಿದರು: ಎಂಪಿ ಗಾಯಕ್ ವಾಡ್ ಸ್ಪಷ್ಟನೆ

ಹೊಸದಿಲ್ಲಿ, ಎ.6: "ನನಗೆ ಅನ್ಯಾಯವಾಗಿದೆ. ನಾನೇನು ತಪ್ಪು ಮಾಡಿದ್ದೇನೆ. ಏರ್ ಇಂಡಿಯಾ ಅಧಿಕಾರಿಗೆ ನನ್ನ ಪರಿಚಯ ಹೇಳಿದಾಗ "ನೀವು ನರೇಂದ್ರ ಮೋದಿ ಅಲ್ಲವಲ್ಲ" ಎಂದು ನನ್ನಲ್ಲಿ ಅನುಚಿತವಾಗಿ ವರ್ತಿಸಿದರು. ಇದಕ್ಕೆ ಬೇಕಾದ ದಾಖಲೆಯನ್ನು ನಿಮ್ಮ ಮುಂದಿಡಲು ಸಿದ್ದ” ಎಂದು ಶಿವಸೇನಾ ಎಂಪಿ ರವೀಂದ್ರ ಗಾಯಕ್ ವಾಡ್ ಲೋಕಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
"ನನ್ನ ಮೇಲೆ ಏರ್ ಇಂಡಿಯಾ ನಿಷೇಧ ಏರಿರುವುದು ಏಕಪಕ್ಷೀಯ ನಿರ್ಧಾರ. ನನ್ನ ವರ್ತನೆಯಿಂದ ಸಂಸತ್ತಿನ ಘನತೆಗೆ ಧಕ್ಕೆ ಉಂಟಾಗಿದ್ದರೆ ಕ್ಷಮೆ ಯಾಚಿಸುತ್ತೇನೆ. ಆದರೆ ಅಧಿಕಾರಿಗಲ್ಲ "ಎಂದು ಹೇಳಿದ್ದಾರೆ.
"ನನಗೆ ನೀಡಬೇಕಿದ್ದ ಸೀಟ್ ನ್ನು ಹಿರಿಯ ನಾಗರಿಕರೊಬ್ಬರಿಗೆ ನೀಡಲಾಗಿತ್ತು. ಆದರೆ ಏರ‍್ ಇಂಡಿಯಾದ ಆಧಿಕಾರಿಗಳು ಈ ಬಗ್ಗೆ ಕಟ್ಟುಕತೆ ಸೃಷ್ಟಿಸಿದ್ದಾರೆ.
" ಕೊಲೆಗೆ ಯತ್ನ ನಡೆಸಿರುವ ಬಗ್ಗೆ ನನ್ನ ಮೇಲೆ ಎಫ್‌ಐಆರ್ ದಾಖಲಾಗಿದೆ. ದಿಲ್ಲಿ ಪೊಲೀಸರು ಹೀಗೆ ಯಾಕೆ ಮಾಡಿದರೋ ನನಗೆ ಗೊತ್ತಿಲ್ಲ. ಈ ವಿಚಾರದಲ್ಲಿ ನನಗೆ ನ್ಯಾಯ ಒದಗಿಸುವಂತೆ ನಾನು ಗೃಹ ಸಚಿವರಿಗೆ ಮನವಿ ಮಾಡುವೆ” ಎಂದರು.





