ಸಿರಿಯಾ ರಾಸಾಯನಿಕ ದಾಳಿಗೆ ಬಲಿಯಾದ ಅವಳಿ ಮಕ್ಕಳಿಗೆ ವಿದಾಯ ಹೇಳುತ್ತಿರುವ ತಂದೆ
ಮನುಕುಲದ ಮನಕಲಕುವ ಚಿತ್ರ

ಬೇರೂತ್,ಎ.6 : ಈ ಚಿತ್ರವನ್ನು ನೋಡಿದರೆ ಎಂಥವರ ಮನಕಲುಕದೆ ಇರದು. ಸಿರಿಯಾ ರಾಸಾಯನಿಕ ದಾಳಿಗೆ ಬಲಿಯಾದ ತನ್ನ ಒಂಬತ್ತು ತಿಂಗಳು ಪ್ರಾಯದ ಅವಳಿ ಮಕ್ಕಳನ್ನು ಪ್ರೀತಿಯಿಂದ ಎದೆಗವಚಿಕೊಂಡಿರುವ ಈ ಚಿತ್ರ ಸಾವಿರ ಮಾತುಗಳನ್ನು ಹೇಳುತ್ತದೆ. ‘‘ಗುಡ್ ಬೈ ಹೇಳು ಮಗುವೇ, ಗುಡ್ ಬೈ ಹೇಳು,’’ ಎಂದು ಆ ದುಃಖತಪ್ತ ತಂದೆ ತನ್ನ ಶಿಶುಗಳಿಗೆ ವಿದಾಯ ಹೇಳುತ್ತಿರುವ ವೀಡಿಯೋ ನೋಡಿದರೆ ಕಣ್ಣಲ್ಲಿ ನೀರು ಬಾರದೇ ಇರದು.
ತನ್ನ ಈ ಮುದ್ದು ನಿರ್ಜೀವ ಕಂದಮ್ಮಗಳನ್ನು ಅಬ್ದುಲ್ ಹಮೀದ್ ಅಲ್ ಯೂಸೆಫ್ ಎಂಬ ಆ ತಂದೆ ಈ ದಾಳಿಗೆ ಬಲಿಯಾದ ತನ್ನ ಕುಟುಂಬದ ಇತರ 22 ಮಂದಿಗಳನ್ನು ಸಮಾಧಿ ಮಾಡಿದ ಸ್ಥಳದಲ್ಲಿಯೇ ಸಮಾಧಿ ಮಾಡಿ ಬಿಟ್ಟಿದ್ದಾನೆ.
ಸಿರಿಯಾದ ಸಣ್ಣ ಪಟ್ಟಣವಾದ ಖಾನ್ ಶೇಖೌನ್ ಎಂಬಲ್ಲಿ ನಡೆದ ಈ ದಾಳಿಯಲ್ಲಿ ಕನಿಷ್ಠ 30 ಮಕ್ಕಳು ಹಾಗೂ 20 ಮಹಿಳೆಯರು ಸೇರಿದಂತೆ 80ಕ್ಕೂ ಅಧಿಕ ಮಂದಿ ಮೃತ ಪಟ್ಟಿದ್ದಾರೆ. ಈ ಪಟ್ಟಣದ ಪ್ರಮುಖ ಕುಟುಂಬವಾದ ಅಲ್ ಯೂಸೆಫ್ ಕುಟುಂಬದಲ್ಲಿ ಅತೀ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಈ ದುರಂತ ಇಡೀ ಪಟ್ಟಣವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಈ ಭೀಕರ ರಾಸಾಯನಿಕ ದಾಳಿ ನಡೆದಾಗ ಅಬ್ದುಲ್ ಹಮೀದ್ ಅಲ್ ಯೂಸೆಫ್ ತನ್ನಿಬ್ಬರು ಅವಳಿ ಮಕ್ಕಳೊಂದಿಗಿದ್ದ. ‘‘ನನ್ನ ಹೆಂಡತಿ ಹಾಗೂ ಪುಟ್ಟ ಕಂದಮ್ಮಗಳನ್ನು ಮನೆಯ ಹೊರಗೆ ಕರೆದುಕೊಂಡು ಹೋದೆ,’’ ಎಂದು ಸ್ಥಳೀಯವಾಗಿ ಒಂದು ಅಂಗಡಿಯನ್ನು ನಡೆಸುವ ಯೂಸೆಫ್ ಹೇಳುತ್ತಾನೆ. ‘‘ಆಗ ಇಬ್ಬರು ಮಕ್ಕಳು ಹಾಗೂ ಪತ್ನಿ ಚೆನ್ನಾಗಿಯೇ ಇದ್ದರು. ಆದರೆ ಹತ್ತು ನಿಮಿಷಗಳಾಗುವಷ್ಟರಲ್ಲಿ ಅವರು ಅಸ್ವಸ್ಥರಾದರು. ಕೂಡಲೇ ಸ್ಥಳೀಯ ವೈದ್ಯರಲ್ಲಿಗೆ ಕರೆದುಕೊಂಡು ಹೋಗಿ ಬೇರೆ ಸಂಬಂಧಿಗಳೆಲ್ಲಿದ್ದಾರೆಂದು ತಿಳಿಯ ಹೊರಟಾಗ ಇಬ್ಬರು ಸಹೋದರರು ಇಬ್ಬರು ಸೋದರಳಿಯಂದಿರು, ಸೋದರ ಸೊಸೆ ಹಾಗೂ ಹಲವಾರು ನೆರೆಹೊರೆಯವರ ಹಾಗೂ ಸ್ನೇಹಿತರ ದೇಹಗಳು ಪತ್ತೆಯಾದವು,’’ ಎಂದು ಆತ ಹೇಳುತ್ತಾನೆ. ಕೊನೆಗೆ ತನ್ನ ಪತ್ನಿ ಹಾಗೂ ಅವಳಿ ಮಕ್ಕಳೂ ಸತ್ತಿದ್ದಾರೆಂದು ತಿಳಿದಾಗ ಆತನಿಗಾದ ಆಘಾತ ಅಷ್ಟಿಷ್ಟಲ್ಲ.
ಹಮೀದ್ ಕೂಡ ಈಗ ಚಿಕಿತ್ಸೆ ಪಡೆಯುತ್ತಿದ್ದರೂ ತನ್ನವರನ್ನು ಕಳೆದುಕೊಂಡ ದುಃಖವೇ ಆತನಿಗೆ ಸಹಿಸಲಸಾಧ್ಯವಾಗಿ ಬಿಟ್ಟಿದೆ, ಎನ್ನುತ್ತಾರೆ ಬದುಕುಳಿದಿರುವ ಆತನ ಕೆಲ ಸಂಬಂಧಿಕರು.







