ಬಾಬ್ರಿ ಮಸೀದಿ ಧ್ವಂಸ ಪ್ರಕರಣ : ಒಳಸಂಚಿನಲ್ಲಿ ಆಡ್ವಾಣಿ,ಇತರ 12 ಜನರು ಭಾಗಿಯಾಗಿದ್ದರು
ಸುಪ್ರೀಂ ಕೋರ್ಟ್‌ನಲ್ಲಿ ಸಿಬಿಐ ಹೇಳಿಕೆ

ಹೊಸದಿಲ್ಲಿ,ಎ.6: ಹಿರಿಯ ಬಿಜೆಪಿ ನಾಯಕರಾದ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ ಸೇರಿದಂತೆ 13 ಜನರು ಅಯೋಧ್ಯೆಯ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಲು ರೂಪಿಸಿದ್ದ ಒಳಸಂಚಿನ ಭಾಗವಾಗಿದ್ದರು ಎಂದು ಗುರುವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ ಸಿಬಿಐ, ಈ ರಾಜಕಾರಣಿಗಳ ವಿರುದ್ಧದ ಆರೋಪಗಳಿಗೆ ಮರುಜೀವ ನೀಡಬೇಕೆಂದು ವಾದಿಸಿದ್ದು, ಸಿಬಿಐ ಅರ್ಜಿಗೆ ಸಂಬಂಧಿಸಿದಂತೆ ತನ್ನ ಆದೇಶವನ್ನು ನ್ಯಾಯಾಲಯವು ಕಾದಿರಿಸಿದೆ.
ಈ ವಿವಿಐಪಿ ಆರೋಪಿಗಳ ವಿಚಾರಣೆಯನ್ನು ರಾಯ್‌ಬರೇಲಿ ನ್ಯಾಯಾಲಯದಿಂದ ಲಕ್ನೋ ನ್ಯಾಯಾಲಯಕ್ಕೆ ವರ್ಗಾವಣೆಗೊಳಿಸಬಹುದೇ ಎಂಬ ಬಗ್ಗೆಯೂ ಸರ್ವೋಚ್ಚ ನ್ಯಾಯಾಲಯವು ನಿರ್ಧರಿಸಲಿದೆ.
ತಾಂತ್ರಿಕ ಕಾರಣಗಳಿಂದಾಗಿ ಆಡ್ವಾಣಿ ಮತ್ತು ಇತರರು ಒಳಸಂಚಿನ ಆರೋಪಗಳನ್ನು ಎದುರಿಸಿರಲಿಲ್ಲ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತು. ಪ್ರಕರಣದ ವಿಚಾರಣೆ ಲಕ್ನೋದ ನ್ಯಾಯಾಲಯದಲ್ಲಿ ನಡೆಯಬೇಕೆಂದು ಅದು ಬಯಸಿದೆ.
1992, ಡಿ.6ರಂದು ಹಿಂದುತ್ವ ಶಕ್ತಿಗಳು ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದವು. ಬಳಿಕ ಹಲವು ಕಡೆಗಳಲ್ಲಿ ನಡೆದ ವ್ಯಾಪಕ ಹಿಂಸಾಚಾರದಲ್ಲಿ 3,000ಕ್ಕೂ ಅಧಿಕ ಜೀವಗಳು ಬಲಿಯಾಗಿದ್ದವು.
ವಿವಾದಿತ ಕಟ್ಟಡ ಧ್ವಂಸಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣಗಳು ದಾಖಲಾಗಿದ್ದವು. ಮೊದಲ ಪ್ರಕರಣದಲ್ಲಿ ಅನಾಮಿಕ ‘ಕರಸೇವಕ ’ರನ್ನು ಆರೋಪಿಗಳೆಂದು ಹೆಸರಿಸಲಾಗಿದ್ದು, ಇದರ ವಿಚಾರಣೆಯು ಲಕ್ನೋದ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಇನ್ನೊಂದು ಪ್ರಕರಣವು ಈ ವಿವಿಐಪಿ ಆರೋಪಿಗಳಿಗೆ ಸಂಬಂಧಿಸಿದ್ದು, ರಾಯ್‌ಬರೇಲಿ ನ್ಯಾಯಾಲಯದಲ್ಲಿದೆ.
ವಿಚಾರಣೆಯನ್ನು ರಾಯ್‌ಬರೇಲಿಯಿಂದ ಲಕ್ನೋ ನ್ಯಾಯಾಲಯಕ್ಕೆ ವರ್ಗಾವಣೆ ಗೊಳಿಸುವ ಮೂಲಕ ಎರಡೂ ಪ್ರಕರಣಗಳ ಜಂಟಿ ವಿಚಾರಣೆಗೆ ತಾನು ಆದೇಶಿಸಬಹುದೆಂದು ನ್ಯಾಯಮೂರ್ತಿಗಳಾದ ಪಿ.ಸಿ.ಘೋಷ್ ಮತ್ತು ಆರ್.ಎಫ್. ನಾರಿಮನ್ ಅವರನ್ನೊಳಗೊಂಡ ಪೀಠವು ಸುಳಿವು ನೀಡಿತು.
ಘಟನೆಯು ಸಂಭವಿಸಿ ಈಗಾಗಲೇ 25 ವರ್ಷಗಳು ಕಳೆದಿದ್ದು, ಎರಡು ವರ್ಷಗಳಲ್ಲಿ ಇದಕ್ಕೊಂದು ಅಂತ್ಯ ಹಾಡಲು ದೈನಂದಿನ ಆಧಾರದಲ್ಲಿ ಕಾಲನಿಗದಿತ ವಿಚಾರಣೆಗೆ ಆದೇಶಿಸುವುದನ್ನು ತಾನು ಪರಿಶೀಲಿಸುವುದಾಗಿಯೂ ಪೀಠವು ತಿಳಿಸಿತು.
ರಾಯ್‌ಬರೇಲಿಯ ವಿಶೇಷ ನ್ಯಾಯಾಲಯವು ಬಾಬ್ರಿ ಪ್ರಕರಣದಲ್ಲಿ ತಾಂತ್ರಿಕ ಕಾರಣಗಳಿಂದ ಕೈಬಿಟ್ಟಿದ್ದ ಬಿಜೆಪಿ ಮತ್ತು ಇತರ ಹಿಂದು ಬಲಪಂಥೀಯ ನಾಯಕರ ವಿರುದ್ಧದ ಒಳಸಂಚು ಆರೋಪಗಳಿಗೆ ತಾನು ಮರುಜೀವ ನೀಡಬಹುದೆಂದು ಸರ್ವೋಚ್ಚ ನ್ಯಾಯಾಲಯವು ಈ ತಿಂಗಳ ಆರಂಭದಲ್ಲಿ ಸುಳಿವು ನೀಡಿತ್ತು.
ಆಡ್ವಾಣಿ ಜೊತೆಗೆ ಹಿರಿಯ ಬಿಜೆಪಿ ನಾಯಕರಾದ ಮುರಳಿ ಮನೋಹರ ಜೋಶಿ, ಉಮಾ ಭಾರತಿ ಮತ್ತು ಕಲ್ಯಾಣ ಸಿಂಗ್,ವಿಶ್ವ ಹಿಂದು ಪರಿಷತ್‌ನ ಹಲವಾರು ಸದಸ್ಯರು ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.







