ಪ್ರತಿಭಟನಾ ನಿರತರ ಮೇಲೆ ಪೋಲೀಸ್ ದೌರ್ಜನ್ಯ: ಟೀಮ್ ಮಂಗಳೂರು ವತಿಯಿಂದ ಖಂಡನಾ ಸಭೆ

ಮಂಗಳೂರು, ಎ.6: ಮಂಗಳೂರಿನ ಸಿಸಿಬಿ ಪೋಲೀಸರು ಪ್ರಕರಣವೊಂದಕ್ಕೆ ಸಂಬಂಧಿಸಿ ಅಹ್ಮದ್ ಖುರೈಶಿ ಎಂಬ ಯುವಕನನ್ನು ವಿಚಾರಣೆಯ ನೆಪದಲ್ಲಿ ಬಂಧಿಸಿ ಆರು ದಿನಗಳ ಕಾಲ ಚಿತ್ರ ಹಿಂಸೆ ನೀಡಿ ಯುವಕನ ಎರಡು ಕಿಡ್ನಿಯು ನಿಷ್ಕ್ರಿಯಗೊಳ್ಳುವ ಮಟ್ಟಿಗೆ ಪೋಲೀಸರು ಅಮಾನವೀಯವಾಗಿ ದೌರ್ಜನ್ಯ ನಡೆಸಿದ್ದು ಖಂಡನಾರ್ಹ. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಿ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಿನ್ನೆ ನಡೆದ ಖಂಡನಾ ಸಭೆಯಲ್ಲಿ ಟೀಮ್ ಮಂಗಳೂರು ಆಗ್ರಹಿಸಿದೆ.
ನಿರಂತರವಾಗಿ ಮುಸ್ಲಿಂ ಯುವಕರನ್ನು ಗುರಿಯಾಗಿಸಿ ಯಾವುದೋ ಒಂದು ಪ್ರಕರಣದ ಹೆಸರಿನಲ್ಲಿ ಬಂಧಿಸಿ, ಇನ್ಯಾವುದೋ ಪ್ರಕರಣಗಳಲ್ಲಿ ಸಿಲುಕಿಸುವ ಷಡ್ಯಂತ್ರ ಕರಾವಳಿ ಜಿಲ್ಲೆಯ ಪೋಲೀಸರಿಂದ ನಡೆಯುತ್ತಿದೆ. ಅದರ ವಿರುದ್ದ ಪ್ರತಿಭಟಿಸುವವರನ್ನು ವಿನಾಃ ಕಾರಣ ಬಲಪ್ರಯೋಗಿಸಿ ಅವರ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಇಲ್ಲಿ ನಿರಂತರವಾಗಿ ನಡೆಯುತ್ತಿರುವಾಗ ಆಡಳಿತ ಪಕ್ಷ ಮೌನವಹಿಸಿರುವುದು ಖಂಡನೀಯ.
ಮುಸ್ಲಿಂ ಯುವಕರು ಅಪರಾಧಿಗಳಾಗಿದ್ದರೆ ಕಾನೂನು ಪ್ರಕಾರ ಅವರನ್ನು ಶಿಕ್ಷೆಗೊಳಪಡಿಸಲಿ. ಅದಲ್ಲದೆ ಅವರ ಮೇಲೆ ಅಮಾನುಷವಾಗಿ ದೌರ್ಜನ್ಯ ನಡೆಸುವುದು ಖಂಡನಾರ್ಹ. ರಾಜ್ಯ ಸರ್ಕಾರ ಇದೇ ರೀತಿ ಮೌನ ವಹಿಸಿದರೆ ಕರಾವಳಿ ಭಾಗದಲ್ಲಿ ಇನ್ನಷ್ಟು ಮುಸ್ಲಿಂ ಯುವಕರು ಅನ್ಯಾಯವಾಗಿ ಬಲಿಪಶು ಆಗುತ್ತಲೇ ಇರುವರು. ಯಾರದೋ ಒತ್ತಡಕ್ಕೆ ಮಣಿದು ಪೋಲೀಸರು ಇಲ್ಲಿನ ಮುಸ್ಲಿಂ ಯುವಕರ ಮೇಲೆ ನಡೆಸುವ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸಂಭಂದಪಟ್ಟವರು ಕ್ರಮ ಜರುಗಿಸಿ, ಖುರೈಶಿಗೆ ಪರಿಹಾರ ನೀಡಬೇಕು ಮತ್ತು ಬಂಧಿತ ಪ್ರತಿಭಟನಾಕಾರರನ್ನು ಬಿಡುಗಡೆಗೊಳಿಸಬೇಕೆಂದು ಟೀಮ್ ಮಂಗಳೂರು ಸದಸ್ಯರು ಒಕ್ಕೊರಳಿನಿಂದ ಆಗ್ರಹಿಸಿದರು.
ನಿನ್ನೆ ಸಂಜೆ ನಡೆದ ಈ ತುರ್ತು ಖಂಡನಾ ಸಭೆಯಲ್ಲಿ ಮಂಗಳೂರು ಆಸುಪಾಸಿನ ಐವತ್ತಕ್ಕೂ ಹೆಚ್ಚು ಟೀಮ್ ಮಂಗಳೂರು ಸದಸ್ಯರು ಪಾಲ್ಗೊಂಡರು.







