ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಿರುಕುಳ ಖಂಡಿಸಿ ಡಿವೈಎಫ್‌ಐ ಪ್ರತಿಭಟನೆ

ಮಂಗಳೂರು,ಎ.6: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಶನ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗವು ವಿಚಾರಣೆ ಹಾಗೂ ಪರಿಶೀಲನೆಯ ನೆಪದಲ್ಲಿ ನಿರ್ದಿಷ್ಟ ಸಮುದಾಯದ ವ್ಯಕ್ತಿಗಳಿಗೆ ವಿವಿಧ ರೀತಿಯಲ್ಲಿ ನೀಡುತ್ತಿರುವ ಕಿರುಕುಳವನ್ನು ಖಂಡಿಸಿ ಡಿವೈಎಫ್‌ಐ ದ.ಕ.ಜಿಲ್ಲಾ ಸಮಿತಿ ಗುರುವಾರ ವಿಮಾನ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿತು.
ವಿಮಾನ ನಿಲ್ದಾಣದ ಕೆಲವು ಸಿಬ್ಬಂದಿ ಮತ್ತು ಅಧಿಕಾರಿಗಳು ಅದರಲ್ಲೂ ಇಮಿಗ್ರೇಶನ್‌ನ ಅಧಿಕಾರಿಗಳಿಂದ ವಿದೇಶಕ್ಕೆ ತೆರಳುವ ಮುಸ್ಲಿಮ್ ಪ್ರಯಾಣಿಕರಿಗೆ ನಿರಂತರ ಕಿರುಕುಳ ನಡೆಯುತ್ತಲಿದ್ದಾರೆ. ಇದರಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಟ್ಟ ಹೆಸರು ಬರುವಂತಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಕಿರುಕುಳ ನೀಡುವ ಅಧಿಕಾರಿ-ಸಿಬ್ಬಂದಿ ವರ್ಗದ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪೂರ್ವಾಗ್ರಹಪೀಡಿತರಾದ ಕೆಲವು ಅಧಿಕಾರಿ-ಸಿಬ್ಬಂದಿ ವರ್ಗವು ವಿಮಾನ ನಿಲ್ದಾಣದಲ್ಲಿ ನಿರ್ದಿಷ್ಟ ಸಮುದಾಯದವನ್ನು ಗುರಿಯಾಗಿಸಿಕೊಂಡು ಹಿಂಸಿಸುತ್ತಿದೆ. ಇಂತಹ ತಪ್ಪಿತಸ್ಥರನ್ನು ವರ್ಗಾವಣೆಗೊಳಿಸಬೇಕು. ವಿಮಾನ ನಿಲ್ದಾಣದಲ್ಲಿ ಜಾತಿ ತಾರತಮ್ಯ ಮಾಡದೆ ಪ್ರಯಾಣಿಕ ಸ್ನೇಹಿಯಾಗಿ ಸೇವೆ ನೀಡಬೇಕು ಎಂದರು.
ಕೇರಳದ ಕಣ್ಣೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಪ್ರಯತ್ನ ನಡೆಯುತ್ತಿರುವ ಈ ಸಂದರ್ಭ ಮಂಗಳೂರು ಅಂತಾರಾಷ್ಟ್ರೀಯ ನಿಲ್ದಾಣದ ಸ್ಥಾನಮಾನಕ್ಕೆ ಧಕ್ಕೆ ಮಾಡುವ ಸಂಚು ಈ ಕಿರುಕುಳದ ಹಿಂದೆ ಅಡಗಿರುವ ಅಪಾಯವಿದೆ. ಹಾಗಾಗಿ ಈ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಿರುವ ಮುನೀರ್ ಕಾಟಿಪಳ್ಳ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್ ಶುಲ್ಕ ಹೆಚ್ಚಳವಾಗಿದ್ದು, ಇದನ್ನು ಕಡಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್‌ಐ ಮುಖಂಡರಾದ ಬಿ.ಕೆ.ಇಮ್ತಿಯಾಝ್, ಜೀವನ್‌ರಾಜ್ ಕುತ್ತಾರ್, ಮುಹಮ್ಮದ್ ಸಾಲಿ ಬಜ್ಪೆ, ಅಬೂಬಕರ್ ಬಾವಾ ಜೋಕಟ್ಟೆ, ನವೀನ್ ಕೊಂಚಾಡಿ, ಸಾದಿಕ್ ಕಣ್ಣೂರು ಮತ್ತಿತರರು ಪಾಲ್ಗೊಂಡಿದ್ದರು.







