ಒಮಿನಿ ಪಲ್ಟಿ; ರಕ್ಷಿಸಲು ಹೋದ ಜನರಿಗೆ ಕಾರಿನಲ್ಲಿದ್ದವರು ಮಾರಕಾಸ್ತ್ರ ತೋರಿಸಿ ಬೆದರಿಸಿ ಓಡಿಸಿದರು ...!

ಸೊರಬ, ಎ.6: ವೇಗವಾಗಿ ಹೋಗುತ್ತಿದ್ದ ಮಾರುತಿ ಓಮಿನಿ ಕಾರೊಂದು ಪಲ್ಟಿ ಹೊಡೆದು ಬಿದ್ದಾಗ, ರಕ್ಷಿಸಲು ಹೋದ ಜನರಿಗೆ ಕಾರಿನಲ್ಲಿದ್ದ ಆಗಂತುಕರು ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ಓಡಿಸಿದ ಘಟನೆ ತಾಲೂಕಿನ ಚಿಕ್ಕ ಇಡಗೋಡು ಕ್ರಾಸ್ ಬಳಿ ನಡೆದಿದೆ.
ಬೆಳಗಿನ ಜಾವ ಸುಮಾರು 6:30ರ ವೇಳೆಯಲ್ಲಿ ಶಿರಾಳಕೊಪ್ಪ ಕಡೆಯಿಂದ ಆನವಟ್ಟಿಯ ಕಡೆಗೆ ಅತೀ ವೇಗವಾಗಿ ಹೋಗುತ್ತಿದ್ದ ಓಮಿನಿ ಕಾರೊಂದು ಆಯತಪ್ಪಿ ರಸ್ತೆಬದಿಯ ಗುಂಡಿಗೆ ಬಿದ್ದಿದೆ. ಸುತ್ತಮುತ್ತಲಿನ ಮನೆಯವರು ಸಹಾಯಕ್ಕೆಂದು ಕಾರು ಬಳಿ ಹೋದಾಗ ಕಾರಿನಲ್ಲಿದ್ದ ವ್ಯಕ್ತಿಗಳೇ ಬಂದೂಕು, ಮಚ್ಚು ತೋರಿಸಿ ಬೆದರಿಸಿ ತಾವಲ್ಲಿಂದ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಸ್ಥಳಿಯ ನಿವಾಸಿಗಳು ಈ ಬಗ್ಗೆ ಆನವಟ್ಟಿ ಪೋಲಿಸ್ ಹಾಗೂ ಫಾರೆಸ್ಟ್ ಇಲಾಖೆಗಳಿಗೆ ಮಾಹಿತಿ ನೀಡಿ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದಾಗ, ಓಮಿನಿಯಲ್ಲಿ ಜಿಂಕೆಯ ಮಾಂಸ ಕಂಡು ಬಂದಿದೆ. ಇದರಿಂದ ಆಶ್ಚರ್ಯಚಕಿತರಾದ ಅಧಿಕಾರಿಗಳು ಕೂಡಲೇ ಮಹಜರ್ ನಡೆಸಿ ಕಾರು ಮತ್ತು ಜಿಂಕೆ ಮಾಂಸವನ್ನು ವಶಕ್ಕೆ ಪಡೆದಿದ್ದು ದುಷ್ಕರ್ಮಿಗಳ ಪತ್ತೆಗೆ ಮುಂದಾಗಿದ್ದಾರೆ.
ತಾಲೂಕು ಬರದಿಂದ ತಲ್ಲಣಗೊಂಡಿದ್ದು ಜನರು ರೋಸಿ ಹೋಗಿದ್ದಾರೆ. ಕಾಡಿನಲ್ಲಿ ಮೇವು ಮತ್ತು ಕುಡಿಯುವ ನೀರು ಸಿಗದಕಾರಣ ಕಾಡು ಪ್ರಾಣಿಗಳು ನಾಡಿನತ್ತ ದಾಹ ತೀರಿಸಿಕೊಳ್ಳಲು ಬರುತ್ತಿದ್ದಾವೆ. ಸಂದರ್ಭವನ್ನೇ ಲಾಭ ಮಾಡಿಕೊಂಡು ಕಾಡು ಪ್ರಾಣಿಗಳನ್ನು ಮಾಂಸ ಮತ್ತು ಚರ್ಮದ ಆಸೆಗಾಗಿ ಹತ್ಯೆ ಮಾಡಲಾಗುತ್ತಿದೆ.
ಹಲವಾರು ದಿನಗಳಿಂದ ಬಹಳಷ್ಟು ಕಾಡು ಪ್ರಾಣಿಗಳು ಮರೆಯಾಗುತ್ತಿದ್ದು ಅವುಗಳನ್ನು ಹತ್ಯೆಮಾಡಿದ ಗ್ಯಾಂಗ್ ಇದಾಗಿರಬಹುದು ಎಂದು ಜನರು ಶಂಕೆವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ಪೋಲಿಸ್ ಹಾಗೂ ಅರಣ್ಯಾಧಿಕಾರಿಗಳು ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿ ಭಾಗವತ್ ಮಸೂದಿ, ಉಪವಲಯ ಅರಣ್ಯಾಧಿಕಾರಿಗಳಾದ ಜಗದೀಶ್, ಶರಣಪ್ಪ, ಲಿಂಗರಾಜ್, ನೇಮಿನಾಥ್ ಹಾಗೂ ಚಾಲಕ ಕಿರಣ್ ಪರೀಶಿಲಿಸಿ ದುಷ್ಕರ್ಮಿಗಳ ಭೇಟೆಯಾಡಲು ಮುಂದಾಗಿದ್ದಾರೆ.







