ಸುಳ್ಯದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಮಡಿಕೇರಿಯಲ್ಲಿ ಶವವಾಗಿ ಪತ್ತೆ
.jpg)
ಮಡಿಕೇರಿ, ಎ.6: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಹತ್ಯೆಗೈದು ನಿರ್ಜನ ಪ್ರದೇಶದ ಗುಂಡಿಗೆ ಮೃತದೇಹವನ್ನು ಎಸೆದಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮಡಿಕೇರಿಯ ಚಾಮುಂಡೇಶ್ವರಿ ನಗರದ ನಿವಾಸಿ 35 ವರ್ಷ ಪ್ರಾಯದ ರವಿ ಎಂಬುವವರೇ ಮೃತ ವ್ಯಕ್ತಿ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಠಾಣಾ ಪೊಲೀಸರ ಸಹಕಾರದೊಂದಿಗೆ ಸುಳ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಡಿಕೇರಿಯ ಗೌಳಿಬೀದಿ ನಿವಾಸಿ ಡಾಲು ಎಂಬಾತನೇ ಬಂಧಿತ ಆರೋಪಿ.
ಇದೇ ಮಾರ್ಚ್ 31ರಂದು ಸುಳ್ಯ ತಾಲ್ಲೂಕಿನ ಕೆವಿಜಿ ಆಸ್ಪತ್ರೆಯಿಂದ ರವಿ ನಿಗೂಢವಾಗಿ ಕಾಣೆಯಾಗಿದ್ದರು. ರವಿ ಪತ್ತೆಗೆ ಕುಟುಂಬಸ್ಥರು ಪ್ರಯತ್ನ ಪಟ್ಟಿದ್ದರೂ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ರವಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣದ ಬಗ್ಗೆ ತನಿಖೆ ನಡೆಸಿದ ಸುಳ್ಯ ಪೊಲೀಸರು ಮಡಿಕೇರಿ ನಗರ ಪೊಲೀಸರ ಸಹಕಾರವನ್ನು ಬಯಸಿದ್ದರು.
ಸುಳ್ಯ ಕೆವಿಜಿ ಆಸ್ಪತ್ರೆಯಿಂದ ರವಿ ಕಾಣೆಯಾಗಿದ್ದರಿಂದ ಪೊಲೀಸರು ಆಸ್ಪತ್ರೆಯಲ್ಲಿದ್ದ ಸಿಸಿ ಕ್ಯಾಮಾರಾಗಳ ಚಿತ್ರಣಗಳನ್ನು ಪರಿಶೀಲನೆ ನಡೆಸಿದ್ದರು. ಆಸ್ಪತ್ರೆಯಲ್ಲಿ ಆರೋಪಿ ಡಾಲು, ರವಿಯೊಂದಿಗೆ ಕಲಹ ನಡೆಸುತ್ತಿದ್ದ ಚಿತ್ರಣ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿತ್ತು. ಇದನ್ನು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ರವಿ ಅವರ ತಂದೆ ಕೆವಿಜಿಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದರಿಂದ ರವಿ ಅಲ್ಲಿಗೆ ಭೇಟಿ ನೀಡಿದ್ದರು.
ಹಣದ ವಿಚಾರದ ಹಿನ್ನೆಲೆ ಡಾಲು ಮೂವರ ಸಹಕಾರದಿಂದ ನಗರದ ಸ್ಟೋನ್ ಹಿಲ್ ಬಳಿ ರವಿಯನ್ನು ಹತ್ಯೆಗೈದು ಮೃತದೇಹವನ್ನು ನಿರ್ಜನವಾದ ತಗ್ಗಿನ ಪ್ರದೇಶಕ್ಕೆ ಎಸೆದು ಪರಾರಿಯಾಗಿದ್ದಾರೆ. ಆರೋಪಿಯೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಸುಳ್ಯ ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆಗೆ ಕ್ರಮ ಕೈಗೊಂಡ್ಡಿದ್ದಾರೆ.







