ಸಂಸತ್ತಿನಿಂದ ನಾಲ್ಕು ಮಸೂದೆಗಳ ಅಂಗೀಕಾರ : ಜಿಎಸ್‌ಟಿ ಜಾರಿಗೆ ಮಾರ್ಗ ಸುಗಮ

ಹೊಸದಿಲ್ಲಿ,ಎ.6: ಸಂಸತ್ತು ಗುರುವಾರ ನಾಲ್ಕು ಮಸೂದೆಗಳನ್ನು ಅಂಗೀಕರಿಸುವುದರೊಂದಿಗೆ ಜುಲೈ 1ರಿಂದ ಐತಿಹಾಸಿಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಮಾರ್ಗ ಸುಗಮಗೊಂಡಿದೆ.
ಕೇಂದ್ರ ಜಿಎಸ್‌ಟಿ ಮಸೂದೆ-2017, ಏಕೀಕೃತ ಜಿಎಸ್‌ಟಿ ಮಸೂದೆ-2017, ಜಿಎಸ್‌ಟಿ (ರಾಜ್ಯಗಳಿಗೆ ಪರಿಹಾರ) ಮಸೂದೆ-2017 ಮತ್ತು ಕೇಂದ್ರಾಡಳಿತ ಪ್ರದೇಶ ಜಿಎಸ್‌ಟಿ ಮಸೂದೆ-2017 ಇವು ರಾಜ್ಯಸಭೆಯಿಂದ ತಿರಸ್ಕೃತಗೊಂಡು ಪ್ರತಿಪಕ್ಷಗಳ ಹಲವಾರು ತಿದ್ದುಪಡಿಗಳೊಂದಿಗೆ ಲೋಸಭೆಗೆ ಮರಳಿಸಲ್ಪಟ್ಟಿದ್ದವು.
ಯಾವುದೇ ತಿದ್ದುಪಡಿಗಳನ್ನು ಒಪ್ಪಿಕೊಳ್ಳದೆ ಮಾ.29ರಂದು ಲೋಕಸಭೆಯು ಈ ಮಸೂದೆಗಳನ್ನು ಅಂಗೀಕರಿಸಿತ್ತು. ಗುರುವಾರ ರಾಜ್ಯಸಭೆಯೂ ಈ ಮಸೂದೆಗಳಿಗೆ ಅಂಗೀಕಾರದ ಮುದ್ರೆಯನ್ನೊತ್ತಿದೆ.
ಈಗ ಎಲ್ಲ ರಾಜ್ಯಗಳು ರಾಜ್ಯ ಜಿಎಸ್‌ಟಿ ಮಸೂದೆಗಳನ್ನು ಅಂಗೀಕರಿಸಬೇಕಿದ್ದು, ಆನಂತರ ಜಿಎಸ್‌ಟಿ ತೆರಿಗೆ ವ್ಯವಸ್ಥೆ ಜಾರಿಗೊಳ್ಳಲಿದೆ.
ಜಿಎಸ್‌ಟಿ ಮಂಡಳಿಯು ಮೇ 18-19ರಂದು ಸಭೆ ಸೇರಿ ತೆರಿಗೆ ದರಗಳ ಬಗ್ಗೆ ಚರ್ಚಿಸಲಿದೆ.
Next Story





