ಪೊಲೀಸ್ ದೌರ್ಜನ್ಯದ ಆರೋಪ; ಗೃಹ ಸಚಿವರು ತಕ್ಷಣ ಮಂಗಳೂರಿಗೆ ಭೇಟಿ ನೀಡಿ ಸತ್ಯ ತಿಳಿಯಲಿ: ಕುಮಾರಸ್ವಾಮಿ

ಬೆಂಗಳೂರು, ಎ.6: ಮಂಗಳೂರಿನಲ್ಲಿ ನಡೆದಿರುವ ಪೊಲೀಸ್ ದೌರ್ಜನ್ಯ ಆರೋಪಗಳ ಬಗ್ಗೆ ಸತ್ಯಾಂಶ ತಿಳಿದುಕೊಳ್ಳಲು ಗೃಹ ಸಚಿವ ಡಾ. ಪರಮೇಶ್ವರ್ ತಕ್ಷಣ ಅಲ್ಲಿಗೆ ಭೇಟಿ ನೀಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ , ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಪೊಲೀಸ್ ದೌರ್ಜನ್ಯದಿಂದ ಅಹ್ಮದ್ ಖುರೇಷಿ ಎಂಬ ಯುವಕ ತೀವ್ರ ಅನಾರೋಗ್ಯಕ್ಕೊಳಗಾಗಿ, ಎರಡೂ ಕಿಡ್ನಿ ವೈಫಲ್ಯಕ್ಕೆ ಒಳಗಾಗಿದ್ದಾನೆ ಎಂದು ಕೇಳಿ ಆಘಾತವಾಯಿತು. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರುಗಳಲ್ಲಿ ಪೊಲೀಸ್ ಇಲಾಖೆ ಸಂಪೂರ್ಣವಾಗಿ ಬಿಜೆಪಿ ಹಿಡಿತದಲ್ಲಿದೆ. ಸರಕಾರ ಕಾಂಗ್ರೆಸ್ ಇದ್ದರೂ ಅಲ್ಲಿನ ಪೋಲೀಸರ ನಿಯಂತ್ರಣ ಸರ್ಕಾರದ ಕೈಯಲ್ಲಿ ಇಲ್ಲ. ಆದ್ದರಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ. ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸಿದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಈ ಬಗ್ಗೆ ರಾಜ್ಯ ಸರಕಾರ ನಿರ್ಲಕ್ಷ್ಯದ ಧೋರಣೆ ಅನುಸರಿಸುತ್ತಿದೆ. ಇದು ಕೆಟ್ಟ ಸಂದೇಶ ರವಾನಿಸುತ್ತದೆ. ಗೃಹ ಸಚಿವರು ತಕ್ಷಣ ಜಿಲ್ಲೆಗೆ ಭೇಟಿ ನೀಡಿ ಸಮಗ್ರ ಮಾಹಿತಿ ಪಡೆಯಬೇಕು. ದೌರ್ಜನ್ಯಕ್ಕೆ ಒಳಗಾದ ಯುವಕನನ್ನು ಭೇಟಿ ಮಾಡಿ ಮಾಹಿತಿ ಪಡೆದು ಆತನಿಗೆ ಸರಕಾರದಿಂದ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಬೇಕು. ಈ ಪ್ರಕರಣದ ಕುರಿತು ತನಿಖೆ ನಡೆಸಿ ಯಾರು ತಪ್ಪು ಮಾಡಿದ್ದಾರೆ ಹಾಗೂ ಯಾರು ಅದಕ್ಕೆ ಪ್ರೇರಣೆ ನೀಡಿದ್ದಾರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಬಿ ಎಂ ಫಾರೂಕ್, ಪ್ರತಿಭಟನಾಕಾರ ವಿರುದ್ಧ ಪೋಲೀಸರ ಲಾಠಿ ಚಾರ್ಜ್ ಖಂಡಿಸಿದರು. ಪೊಲೀಸರಿಂದ ಹಲ್ಲೆಗೊಳಗಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದನೆಂದು ಆರೋಪಿಸಲಾಗಿರುವ ಅಹ್ಮದ್ ಖುರೇಷಿಗೆ ನ್ಯಾಯ ಸಿಗಬೇಕು ಹಾಗು ತಪ್ಪಿತಸ್ಥ ಪೋಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.







