ಆಡುಗಳಿಗೆ ಕಲ್ಲೆಸೆದ ಮಹಿಳೆ, ಕುಟುಂಬದ ಮೇಲೆ ಹಲ್ಲೆ ; ಇಬ್ಬರ ಬಂಧನ

ಉಳ್ಳಾಲ, ಎ. 6: ತನ್ನ ಹೊಲದಲ್ಲಿ ಮೇಯುತ್ತಿದ್ದ ನೆರೆ ಮನೆಯ ಆಡುಗಳನ್ನು ಕಲ್ಲೆಸೆದು ಓಡಿಸಿದ ಮಹಿಳೆಗೆ ಆಡುಗಳ ಮಾಲಕ ಮತ್ತಿತರರು ಮನೆಯೊಳಗೆ ನುಗ್ಗಿ ಕಬ್ಬಿಣದ ಮಹಿಳೆಗೆ ಹಲ್ಲೆ ಮಾಡಿದ್ದಲ್ಲದೆ ತಡೆಯಲು ಬಂದ ಗಂಡ ಮತ್ತು ಮಗನಿಗೂ ಹಲ್ಲೆಗೈದ ಘಟನೆ ಬುಧವಾರ ರಾತ್ರಿ ಕಿನ್ಯದ ಬೆಳರಿಂಗೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ಉಳ್ಳಾಲ ಠಾಣಾ ಪೊಲೀಸರು ಹಲ್ಲೆಗೈದ ಇಬ್ಬರನ್ನು ಬಂಧಿಸಿದ್ದಾರೆ.
ಕಿನ್ಯ ಗ್ರಾಮದ ಬೆಳರಿಂಗೆ ನಿವಾಸಿ ಪುಷ್ಪಾವತಿ (53)ಗಂಡ ಜನಾರ್ಧನ್(60)ಮಗ ಅಜಿತ್(23) ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದವರು.
ಪುಷ್ಪಾವತಿ ಮತ್ತು ಜನಾರ್ಧನ್ ದಂಪತಿ ಬೆಳರಿಂಗೆಯಲ್ಲಿ ಕೃಷಿ ನಡೆಸುತ್ತಿದ್ದಾರೆ. ಇವರ ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ಹಮೀದ್ ಎಂಬವರು 15ಕ್ಕೂ ಹೆಚ್ಚು ಆಡುಗಳನ್ನು ಸಾಕಿದ್ದು ಆಡುಗಳು ನಿತ್ಯವೂ ಪುಷ್ಪಾವತಿ ಅವರ ಕೃಷಿ ಭೂಮಿ ಮೇಯಲು ಬರುತ್ತಿತ್ತು ಎನ್ನಲಾಗಿದೆ.
ಬುಧವಾರ ಮಧ್ಯಾಹ್ನವೂ ಹೊಲಕ್ಕೆ ಬಂದ 10 ಆಡುಗಳನ್ನು ಪುಷ್ಪಾವತಿ ಅವರು ಕಲ್ಲೆಸೆದು ಓಡಿಸಿದ್ದಾರೆ. ಇದರಿಂದ ಕುಪಿತಗೊಂಡ ಹಮೀದ್ ಇತರರೊಂದಿಗೆ ಸೇರಿ ಬುಧವಾರ ರಾತ್ರಿ ವೇಳೆ ಪುಷ್ಪಾವತಿ ಅವರ ಮನೆಗೆ ಅಕ್ರಮ ಪ್ರವೇಶಗೈದು ಆಕೆಗೆ ಹಲ್ಲೆ ನಡೆಸಿದ್ದಲ್ಲದೆ,ತಡೆಯಲು ಬಂದ ಅಜಿತ್ ಮತ್ತು ಜನಾರ್ಧನ್‌ಗೂ ಕೈಗಳಿಂದ ಹಲ್ಲೆಗೈದಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಬ್ಬರ ಬಂಧನ:
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಉಳ್ಳಾಲ ಪೊಲೀಸ್ ಇನ್ಸ್‌ಪೆಕ್ಟರ್ ಗೋಪಿಕೃಷ್ಣ ಅವರು ಬುಧವಾರ ರಾತ್ರಿಯೇ ಕಾರ್ಯಾಚರಣೆ ನಡೆಸಿ ಇಬ್ಬರು ಸಹೋದರರಾದ ಸಫಾಕ್(26)ಮತ್ತು ಶಕೀಲ್(20)ನ್ನು ಬಂಧಿಸಿದ್ದಾರೆ. ಹಮೀದ್ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಮುಂದುವರದಿದೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







