ಆಲ್ವಾರ್‌ನಲ್ಲಿ ಗೋರಕ್ಷಕರಿಂದ ಹಲ್ಲೆ ನಡೆದಿಲ್ಲ:ನಕ್ವಿ

ಹೊಸದಿಲ್ಲಿ,ಎ.6: ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ರಾಜಸ್ಥಾನದ ಆಲ್ವಾರ್‌ನಲ್ಲಿ ಗೋಸಾಗಾಟಗಾರರ ಮೇಲೆ ಗೋರಕ್ಷಕರಿಂದ ಯಾವುದೇ ಹಲ್ಲೆ ನಡೆದಿಲ್ಲ ಎಂದು ಸಹಾಯಕ ಸಂಸದೀಯ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರು ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದರು.
ಗೋರಕ್ಷಕರು ದನಗಳನ್ನು ಸಾಗಿಸುತ್ತಿದ್ದ ವಾಹನಗಳ ಮೇಲೆ ದಾಳಿ ನಡೆಸಿದ್ದಾರೆ. ಓರ್ವನನ್ನು ಹತ್ಯೆ ಮಾಡಿದ್ದು, ಹಲವರನ್ನು ಗಾಯಗೊಳಿಸಿದ್ದಾರೆ ಎಂಬ ಕಾಂಗ್ರೆಸ್ ಸದಸ್ಯ ಮಧುಸೂದನ ಮಿಸ್ತ್ರಿಯವರ ಹೇಳಿಕೆಗೆ ಅವರು ಉತ್ತರಿಸುತ್ತಿದ್ದರು.
ನಕ್ವಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಅವರು, ಸಚಿವರ ಅಜ್ಞಾನದ ಬಗ್ಗೆ ತಾನು ವಿಷಾದಿಸುತ್ತೇನೆ. ನ್ಯೂಯಾರ್ಕ್ ಟೈಮ್ಸ್‌ಗೂ ವಿಷಯ ಗೊತ್ತಾಗಿದೆ, ಆದರೆ ಸಚಿವರಿಗೆ ಏನೂ ಗೊತ್ತಿಲ್ಲ ಎಂದು ಕುಟುಕಿದರು.
ಇದೊಂದು ಗಂಭೀರ ಸ್ವರೂಪದ ವಿಷಯವಾಗಿದೆ ಎಂದ ಉಪಸಭಾಪತಿ ಪಿ.ಜೆ.ಕುರಿಯನ್ ಅವರು, ಉಭಯ ಪಕ್ಷಗಳ ಹೇಳಿಕೆ ತನಗೆ ತೃಪ್ತಿ ನೀಡಿಲ್ಲ ಎಂದರಲ್ಲದೆ, ಈ ಕುರಿತು ಸದನಕ್ಕೆ ವರದಿಯನ್ನು ಸಲ್ಲಿಸಲು ಗೃಹಸಚಿವ ರಾಜನಾಥ್ ಸಿಂಗ್ ಅವರಿಗೆ ತಿಳಿಸುವಂತೆ ನಕ್ವಿಯವರಿಗೆ ಸೂಚಿಸಿದರು.







