ಅಂತರ್ಜಾತಿ ವಿವಾಹ:ಸ್ವಂತ ಮಗಳನ್ನೇ ಕೊಂದ ಕ್ರುದ್ಧ ತಂದೆ

ಮುಂಬೈ,ಎ.6: ಅಂತರ್ಜಾತಿ ವಿವಾಹವಾಗಿದ್ದಕ್ಕಾಗಿ ತಂದೆಯೋರ್ವ ತನ್ನ 21ರ ಹರೆಯದ ಪುತ್ರಿಯನ್ನು ಕೊಲೆ ಮಾಡಿರುವ ದುರಂತ ಘಟನೆ ಮಹಾರಾಷ್ಟ್ರದ ಬುಲ್ಡಾನಾ ಜಿಲ್ಲೆಯ ನಿಮ್ಖೆಡಾ ಗ್ರಾಮದಲ್ಲಿ ನಡೆದಿದೆ.
ಬಾಬು ಶಿವಾರೆ ತನ್ನ ಪುತ್ರಿ ಮನೀಷಾ ಹಿಂಗನೆಯನ್ನು ಬುಧವಾರ ಕೊಡಲಿಯಿಂದ ಕೊಚ್ಚಿ ಹತ್ಯಗೈದಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಒಂದೇ ಪರಿಸರದ ನಿವಾಸಿಗಳಾಗಿದ್ದ ಮನೀಷಾ ಮತ್ತು ಬೇರೆ ಜಾತಿಗೆ ಸೇರಿದ ಗಣೇಶ ಪರಸ್ಪರ ಪ್ರೇಮಿಸುತ್ತಿದ್ದರು. ಆದರೆ ಶಿವಾರೆ ಪುತ್ರಿಯ ಮದುವೆಯನ್ನು ಎ.20ರಂದು ಇನ್ನೊಬ್ಬ ಯುವಕನೊಂದಿಗೆ ಮಾಡಲು ನಿರ್ಧರಿಸಿದ್ದ. ತಮ್ಮ ಮನೆಗಳಿಂದ ಪರಾರಿಯಾಗಿದ್ದ ಮನೀಷಾ ಮತ್ತು ಗಣೇಶ ಮಾ.23ರಂದು ಮದುವೆಯಾಗಿದ್ದು, ಕೆಲವು ದಿನಗಳ ಕಾಲ ಬುಲ್ಡಾನಾದ ಮಲ್ಕಾಪುರ ಪ್ರದೇಶದಲ್ಲಿ ವಾಸವಾಗಿದ್ದರು.
ಬಳಿಕ ಊರಿನಲ್ಲೀಗ ಎಲ್ಲ ಸರಿಯಾಗಿರಬಹುದು ಎಂದು ಭಾವಿಸಿದ್ದ ದಂಪತಿ ಗ್ರಾಮಕ್ಕೆ ವಾಪಸಾಗಿ ಗಣೇಶನ ಮನೆಯಲ್ಲಿ ವಾಸವಿದ್ದರು. ಔಷಧಿಗಳ ಮಾರಾಟ ಪ್ರತಿನಿಧಿಯಾಗಿರುವ ಗಣೇಶ ಬುಧವಾರ ಕರ್ತವ್ಯಕ್ಕೆ ತೆರಳಿದ್ದು, ಆತನ ಹೆತ್ತವರೂ ಮನೆಯಲ್ಲಿರಲಿಲ್ಲ. ಈ ಸಂದರ್ಭ ಸಾಧಿಸಿದ ಶಿವಾರೆ ಅಲ್ಲಿಗೆ ತೆರಳಿ ಮನೀಷಾಳನ್ನು ಹತ್ಯೆ ಮಾಡಿ ಬಳಿಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದು, ಆತನನ್ನು ಬಂಧಿಸಲಾಗಿದೆ.





