ಕಾರವಾರ: ಬಂದರು ಆದಾಯದಲ್ಲಿ ಚೇತರಿಕೆ

ಕಾರವಾರ, ಎ.6: ಪ್ರಧಾನಿಯವರ ಮೇಕ್ ಇನ್ ಇಂಡಿಯಾ ಕಲ್ಪನೆ ಸಾಕಾರ ಗೊಳ್ಳಲು ದೇಶದ ಕರಾವಳಿಯ ಬಂದರುಗಳಲ್ಲಿ ಮತ್ತು ಹಡಗು ಉದ್ಯಮದಲ್ಲಿ ಸಾಕಷ್ಟು ಅವಕಾಶಗಳಿವೆ ಎಂದು ಬಂದರು ನಿರ್ದೇಶಕ ಕ್ಯಾಪ್ಟನ್ ಸಿ.ಸ್ವಾಮಿ ಹೇಳಿದರು. ನಗರದ ಬಂದರು ಇಲಾಖೆ ಆವರಣದಲ್ಲಿ ನಡೆದ 54ನೆ ರಾಷ್ಟ್ರೀಯ ನಾವಿಕ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕದ 300 ಕಿ.ಮೀ. ಕರಾವಳಿ ತೀರದ ಪ್ರದೇಶಗಳಲ್ಲಿರುವ ಬಂದರುಗಳಲ್ಲಿ ನವ ಮಂಗಳೂರು ಬಂದರು ಪ್ರಮುಖವಾಗಿದೆ. ರಾಜ್ಯದಲ್ಲಿರುವ 11 ಚಿಕ್ಕ ಬಂದರುಗಳಲ್ಲಿ ಕಾರವಾರ ಬಂದರು ಮಾತ್ರ ಸರ್ವಋತು ವಾಣಿಜ್ಯ ಬಂದರಾಗಿರುವುದು ವಿಶೇಷವಾಗಿದೆ ಎಂದರು.
ಇಲ್ಲಿನ ವಾಣಿಜ್ಯ ಬಂದರಿನ ಆದಾಯದಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ ಶೇ.6.2ರಷ್ಟು ಚೇತರಿಕೆ ಕಂಡುಬಂದಿದ್ದು, 2016-17ನೆ ಸಾಲಿನಲ್ಲಿ ಒಟ್ಟು 5.82 ಲಕ್ಷ ಮೆಟ್ರಿಕ್ ಟನ್ ಸರಕು ಸಾಗಣೆ ನಡೆದು 11.32 ಕೋಟಿ ರೂ, ಆದಾಯ ಗಳಿಸಿದೆ. ಕರಾವಳಿಯಲ್ಲಿ ವಿಶೇಷ ಆರ್ಥಿಕ ವಲಯ ಗಳ ನಿರ್ಮಾಣದ ಮೂಲಕ ಜಲ ಸಾರಿಗೆ ಉದ್ಯಮ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ. ದೇಶದಲ್ಲಿ 7,517 ಕಿ.ಮೀ. ಉದ್ದದ ಕರಾವಳಿ ಗಡಿ ಇದ್ದು, ಇಲ್ಲಿ ಬಂದರುಗಳ ಅಭಿವೃದ್ಧಿ, ವಾಣಿಜ್ಯ ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿ ಯಾರ್ಡ್‌ಗಳ ನಿರ್ಮಾಣದ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಜನರು ಉದ್ಯೋಗ ಪಡೆಯಬಹುದಾಗಿದೆ. ಅಲ್ಲದೆ ಶಿಪ್ ರಿಪೇರ್ ಮತ್ತು ಶಿಪ್ ಬಿಲ್ಡ್ ಕ್ಷೇತ್ರದಲ್ಲಿ ಸಾರ್ವಜನಿಕ ಖಾಸಗಿ ಬಂಡವಾಳ ಹೂಡಿಕೆ ಮೂಲಕ ದೇಶದ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐ.ಎನ್.ಎಸ್. ಕದಂಬ ನೌಕಾನೆಲೆಯ ಕಮಾಂಡರ್ ದಿನೇಶ್ ಸಿಂಗ್ ಮಾತನಾಡಿ, ಕಾರವಾರ ಬಂದರು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಜಿಲ್ಲೆಯ ಅಭಿವೃದ್ಧಿಗೆ ಸಹಾಯಕವಾಗಿದೆ. ಬಂದರಿನ ಅಭಿವೃದ್ಧಿಯಿಂದ ಮುಂದೆ ಕಾರವಾರವು ಚೆನ್ನೈ, ಮುಂಬೈನಂತಹ ಬೃಹತ್ ನಗರವಾಗಿ ಬೆಳವಣಿಗೆ ಹೊಂದಲಿದೆ ಎಂದು ಹೇಳಿದರು.
ಹಡಗಿನ ಸಂಚಾರ ನಿರ್ವಹಣಾ ವ್ಯವಸ್ಥೆಗಳ ಅಳವಡಿಕೆಗೆ ಭಾರತ ಸರಕಾರವು ಕಾರವಾರ ಬಂದರನ್ನು ಆಯ್ಕೆ ಮಾಡಿದ್ದು, 11.08 ಕೋಟಿ ರೂ. ಅನುದಾನವನ್ನು ಇದಕ್ಕಾಗಿ ಬಿಡುಗಡೆ ಮಾಡಿದೆ. ಅಂದಾಜು 33 ಕೋಟಿ ರೂ. ಅನುದಾನದಲ್ಲಿ 8.5 ಮೀ. ಪ್ರದೇಶವನ್ನು ಹೂಳೆತ್ತುವ ಕಾಮಗಾರಿಗಾಗಿ ಚೆನ್ನೈ ಮೂಲದ ಕಂಪೆನಿಯೊಂದಕ್ಕೆ ಟೆಂಡರ್ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಬಂದರನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಪ್ರಯತ್ನಿಸಲಾಗುವುದು.
ಕ್ಯಾಪ್ಟನ್ ಸಿ.ಸ್ವಾಮಿಬಂದರು ನಿರ್ದೇಶಕ
ಪ್ರಶಸ್ತಿ ವಿತರಣೆ
ಕಾರವಾರ ಬಂದರು ಇಲಾಖೆಯಲ್ಲಿ ಅತ್ಯಂತ ಉತ್ತಮ ಗುಣಮಟ್ಟದ ವಹಿವಾಟು ನಡೆಸಿದ ಕಂಪೆನಿಗಳಿಗೆ ಕಾರ್ಯಕ್ರಮದಲ್ಲಿ ವಿವಿಧ ಪ್ರಶಸ್ತಿಗಳನ್ನು ನೀಡಲಾಯಿತು. ಜೊತೆಗೆ ನಾವಿಕ ದಿನಾಚರಣೆಯ ನಿಮಿತ್ತ ಬಂದರು ಗೃಹ ಸಮುಚ್ಛಯದಲ್ಲಿನ ನಿವಾಸಿಗಳಿಗಾಗಿ ಏರ್ಪಡಿಸಲಾಗಿದ್ದ ವಿವಿಧ ಕ್ರೀಡಾ ಸ್ಪರ್ಧೆಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ರಫ್ತು ವ್ಯವಹಾರ ತೀವ್ರ ಕುಸಿತ ನಗರದ ವಾಣಿಜ್ಯ ಬಂದರಿನಲ್ಲಿ ಕಳೆದ ವರ್ಷದ ವಹಿವಾಟಿಗೆ ಹೋಲಿಸಿದರೆ ಈ ವರ್ಷ ಆಮದು ವಹಿವಾಟು ಚೇತರಿಕೆ ಕಂಡರೆ ರಫ್ತು ವ್ಯವಹಾರ ಮಾತ್ರ ತೀವ್ರವಾಗಿ ಕುಸಿತ ಕಂಡಿದೆ. 2015-16 ನೇ ಸಾಲಿನಲ್ಲಿ ಬಂದರಿಗೆ ಒಟ್ಟು 119 ಹಡಗುಗಳು ಆಗಮಿಸಿದ್ದು, ಪ್ರಸಕ್ತ 2016-17 ನೇ ಸಾಲಿನಲ್ಲಿ 113 ಹಡಗುಗಳು ಬಂದಿವೆ. ಕಳೆದ ಬಾರಿ ಆಮದಿನ ಪ್ರಮಾಣವು 4,46,773 ಮೆಟ್ರಿಕ್ ಟನ್ ಇದ್ದದ್ದು ಈ ಬಾರಿ 5,04,923 ಮೆಟ್ರಿಕ್ ಟನ್‌ಗೆ ಏರಿಕೆ ಕಂಡಿದ್ದು ಶೇ.13 ರಷ್ಟು ಏರಿಕೆಯಾಗಿದೆ. ಕಳೆದ ಸಾಲಿನಲ್ಲಿ ರಫ್ತಿನ ಪ್ರಮಾಣವು 2,67,584 ಮೆಟ್ರಿಕ್ ಟನ್ ಇದ್ದಿದ್ದು ಈ ಸಾಲಿನಲ್ಲಿ ಕೇವಲ 77,883 ಮೆಟ್ರಿಕ್ ಟನ್ ಮಾತ್ರ ರಫ್ತು ವಹಿವಾಟು ನಡೆದಿದೆ.
ಕಳೆದ ಸಾಲಿನಲ್ಲಿ 10,66,61,228 ಆದಾಯ ಗಳಿಸಲಾಗಿದ್ದು, ಈ ಸಾಲಿನಲ್ಲಿ 11,32,25,857 ಆದಾಯ ಗಳಿಸಿ ಶೇ.6.2 ರಷ್ಟು ಏರಿಕೆ ಕಂಡಿದೆ.
ಪ್ರಸಕ್ತ 2016-17ನೇ ಸಾಲಿನಲ್ಲಿ ಕಸ್ಟಮ್ ಡಿಪಾರ್ಟ್‌ಮೆಂಟ್ ಬಂದರಿನ ಚಟುವಟಿಕೆಗಳಿಂದ 107.92 ಕೋಟಿ ರೂ. ಆದಾಯ ಗಳಿಸಿದೆ. ಸರ್ವಿಸ್ ಟ್ಯಾಕ್ಸ್ ಇಲಾಖೆಯು ಬಂದರಿನ ಚಟುವಟಿಕೆಗಳಿಂದ 2.06 ಕೋಟಿ ರೂ. ಆದಾಯವನ್ನು ಗಳಿಸಿದೆ.
ಪ್ರಸಕ್ತ ಸಾಲಿನಲ್ಲಿ ನಡೆದ ವಹಿವಾಟುಗಳ ವಿವರವನ್ನು ಗಮನಿಸಿದಾಗ ಡಾಂಬರು 2,20,647 ಮೆ.ಟನ್, ಎಚ್‌ಎಸ್‌ಡಿ. 1,10,923 ಮೆ.ಟನ್, ಕೈಗಾರಿಕಾ ಉಪ್ಪು 98,400 ಮೆ.ಟನ್, ರಾಕ್ ಪಾಸ್ಫೇಟ್ 39,500 ಮೆ.ಟನ್, ಪಾಮ್ ಎಣ್ಣೆ 27,800 ಮೆ.ಟನ್, ಕಾಸ್ಟಿಕ್ ಸೋಡಾ 7,653 ಮೆ.ಟನ್ ಆಮದಾಗಿದ್ದು, ಕಾಕಂಬಿ 77,883 ಮೆ.ಟನ್ ರಫ್ತಾಗಿದೆ. ಒಟ್ಟಾರೆಯಾಗಿ 5,82,806 ಮೆಟ್ರಿಕ್ ಟನ್ ವಹಿವಾಟು ಬಂದರಿನಲ್ಲಿ ನಡೆದಿದೆ.







