ಮಟ್ಕಾ ಅಡ್ಡೆಗಳ ಮೇಲೆ ದಾಳಿ: 12 ಮಂದಿಯ ಬಂಧನ
ಶಿವಮೊಗ್ಗ, ಎ. 6: ಜಿಲ್ಲೆಯ ಭದ್ರಾವತಿ ಪಟ್ಟಣ ಹಾಗೂ ತಾಲೂಕಿನ ವಿವಿಧೆಡೆ ಅವ್ಯಾಹತವಾಗಿ ನಡೆದು ಕೊಂಡು ಬರುತ್ತಿದ್ದ ಮಟ್ಕಾ ಅಡ್ಡೆಗಳ ವಿರುದ್ಧ ಪೊಲೀಸ್ ಇಲಾಖೆ ಸಮರ ಸಾರಿದ್ದು, ಮಟ್ಕಾ ದಂಧೆ ನಡೆಸುತ್ತಿದ್ದ 12 ಮಂದಿ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಪೃಥ್ವಿರಾಜ್, ರಜಾಜ್, ಕೋಟೇಶ್ವರ, ಕೃಷ್ಣ, ಮಂಜು, ಪ್ರವೀಣ್, ರಾಕಿ, ಕೃಷ್ಣ, ಗಿರಿ, ಕುಮಾರ್, ಮಂಜುನಾಥ ಹಾಗೂ ಮೂರ್ತಿ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಇವರಿಂದ ಮಟ್ಕಾ ಜೂಜಾಟಕ್ಕೆ ಬಳಸಿದ್ದ 63 ಸಾವಿರ ರೂ. ನಗದು ಸೇರಿದಂತೆ ಮಟ್ಕಾ ಚೀಟಿಗನ್ನು ವಿಶೇಷ ಪೊಲೀಸ್ ತಂಡಗಳು ವಶಕ್ಕೆ ಪಡೆದು ಕೊಂಡಿವೆ. ಈ ಸಂಬಂಧ ಶಿವಮೊಗ್ಗ ಡಿಸಿಬಿ ಪೊಲೀಸ್ ಠಾಣೆಯಲ್ಲಿ 12 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಮಟ್ಕಾ ಹಾವಳಿ ಹೆಚ್ಚುತ್ತಿರುವ ಕುರಿತಂತೆ ಇತ್ತೀಚೆಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಪೊಲೀಸ್ ಇಲಾಖೆಗೆ ಬಂದಿದ್ದವು. ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆಯವರು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳ ಉಸ್ತುವಾರಿಯಲ್ಲಿ ವಿಶೇಷ ಪೊಲೀಸ್ ತಂಡಗಳನ್ನು ರಚನೆ ಮಾಡಿದ್ದರು. ಈ ತಂಡಗಳು ಗುಪ್ತವಾಗಿ ಮಟ್ಕಾ ದಂಧೆ ನಡೆಸುತ್ತಿದ್ದವರ ಮಾಹಿತಿ ಕಲೆ ಹಾಕಿ, ದಿಢೀರ್ ದಾಳಿ ನಡೆಸಿ 12 ಜನ ಆರೋಪಿಗಳನ್ನು ಬಂಧಿಸಿವೆ.





