ಟೆಸ್ಟ್ ಕ್ರಿಕೆಟ್‌ಗೆ ಮಿಸ್ಬಾವುಲ್‌ಹಕ್ ವಿದಾಯ

ಲಾಹೋರ್, ಎ.6: ಮುಂಬರುವ ವೆಸ್ಟ್‌ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಬಳಿಕ ತಾನು ಪಾಕ್ ತಂಡವನ್ನು ಕೊನೆಯ ಬಾರಿ ಪ್ರತಿನಿಧಿಸಲಿದ್ದೇನೆ ಎಂದು ಗುರುವಾರ ಲಾಹೋರ್‌ನಲ್ಲಿ ಘೋಷಿಸಿದ ಪಾಕಿಸ್ತಾನದ ಕ್ರಿಕೆಟ್ ತಂಡದ ನಾಯಕ ಮಿಸ್ಬಾವುಲ್ ಹಕ್ ತನ್ನ ವೃತ್ತಿಜೀವನಕ್ಕೆ ಸಂಬಂಧಿಸಿ ಕಳೆದ ಕೆಲವು ತಿಂಗಳಿಂದ ಕೇಳಿಬರುತ್ತಿರುವ ವದಂತಿಗೆ ತೆರೆ ಎಳೆದಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ಅತ್ಯಂತ ಹಿರಿಯ ಆಟಗಾರನಾಗಿರುವ ಮಿಸ್ಬಾ ಪಾಕ್ ಕಂಡ ಅತ್ಯಂತ ಯಶಸ್ವಿ ನಾಯಕನಾಗಿದ್ದಾರೆ. 2010ರಲ್ಲಿ ಪಾಕ್ ತಂಡ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಪಾಕ್ ಪರವಾಗಿ 72 ಟೆಸ್ಟ್ ಹಾಗೂ 162 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2001ರಲ್ಲಿ ಟೆಸ್ಟ್ ಕ್ರಿಕೆಟಿಗೆ ಕಾಲಿಟ್ಟಿರುವ ಮಿಸ್ಬಾ 4,951 ರನ್ ಗಳಿಸಿದ್ದಾರೆ. ಏಕದಿನದಲ್ಲಿ ಶತಕ ದಾಖಲಿಸದೇ 5,122 ರನ್ ಗಳಿಸಿ ಗಮನ ಸೆಳೆದಿದ್ದರು. 2015ರಲ್ಲಿ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು.
ಗುರುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ 43ರ ಹರೆಯದ ಮಿಸ್ಬಾವುಲ್‌ಹಕ್,‘‘ಮುಂಬರುವ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿ ನನ್ನ ಕೊನೆಯ ಪಂದ್ಯವಾಗಿದ್ದು, ದೇಶೀಯ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸುವೆ’’ಎಂದು ಹೇಳಿದ್ದಾರೆ.
ಟ್ವೆಂಟಿ-20 ಹಾಗೂ ಏಕದಿನ ತಂಡದ ನಾಯಕನಾಗಿರುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಸರ್ಫರಾಝ್ ಅಹ್ಮದ್ ಅವರು ಮಿಸ್ಬಾವುಲ್‌ಹಕ್ ಉತ್ತರಾಧಿಕಾರಿಯಾಗುವ ಸಾಧ್ಯತೆಯಿದೆ.
53 ಟೆಸ್ಟ್ ಪಂದ್ಯಗಳಲ್ಲಿ ಪಾಕ್ ತಂಡವನ್ನು ನಾಯಕನಾಗಿ ಮುನ್ನಡೆಸಿರುವ ಮಿಸ್ಬಾ 24 ಪಂದ್ಯಗಳಲ್ಲಿ ಜಯ, 18ರಲ್ಲಿ ಸೋಲು ಹಾಗೂ 11 ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದಾರೆ. ಭದ್ರತಾ ಭೀತಿಯಿಂದಾಗಿ ಸ್ವದೇಶದಲ್ಲಿ ಒಂದೂ ಟೆಸ್ಟ್ ಪಂದ್ಯಗಳನ್ನಾಡದ ಪಾಕ್ ತಂಡ ಕಳೆದ ವರ್ಷದ ಆಗಸ್ಟ್‌ನಲ್ಲಿ ವಿಶ್ವದ ನಂ.1 ಸ್ಥಾನಕ್ಕೇರಿದ್ದು, ಆಗ ಮಿಸ್ಬಾ ತಂಡದ ನಾಯಕನಾಗಿದ್ದರು. ದಕ್ಷಿಣ ಆಫ್ರಿಕ ವಿರುದ್ಧ ಟೆಸ್ಟ್‌ನಲ್ಲಿ ಮೊದಲ ಬಾರಿ ಪಾಕ್ ತಂಡವನ್ನು ಮುನ್ನಡೆಸಿದ್ದ ಮಿಸ್ಬಾವುಲ್ ಹಕ್ ನ್ಯೂಝಿಲೆಂಡ್ ವಿರುದ್ಧ ಸರಣಿಯಲ್ಲಿ 1-0 ಅಂತರದಿಂದ ಜಯ ಸಾಧಿಸಲು ನೆರವಾಗಿದ್ದರು.
ಮಿಸ್ಬಾ ನೇತೃತ್ವದಲ್ಲಿ 2012ರಲ್ಲಿ ಇಂಗ್ಲೆಂಡ್ ವಿರುದ್ಧ 3-0 ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸಿದ್ದ ಪಾಕ್ ಏಳು ವರ್ಷಗಳ ಬಳಿಕ ಆಂಗ್ಲರ ವಿರುದ್ಧ ಮೊದಲ ಜಯ ಸಾಧಿಸಿತ್ತು. 2014ರಲ್ಲಿ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ನಲ್ಲಿ ಎರಡೂ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಮಿಸ್ಬಾ ಪಾಕ್ ತಂಡ 20 ವರ್ಷಗಳ ಬಳಿಕ ಆಸೀಸ್ ವಿರುದ್ಧ ಮೊದಲ ಬಾರಿ ಸರಣಿ ಜಯಿಸಲು ಪ್ರಮುಖ ಕಾಣಿಕೆ ನೀಡಿದ್ದರು. 2016ರಲ್ಲಿ ಇಂಗ್ಲೆಂಡ್ ವಿರುದ್ಧ ಅದರದೇ ನೆಲದಲ್ಲಿ 2-2 ರಿಂದ ಡ್ರಾ ಸಾಧಿಸಿದ್ದ ಪಾಕ್ ತಂಡ ವಿಶ್ವದ ನಂ.1 ತಂಡವಾಗಿ ಹೊರಹೊಮ್ಮಿತ್ತು. ಆದರೆ, ನ್ಯೂಝಿಲೆಂಡ್‌ನ ವಿರುದ್ಧ 31 ವರ್ಷಗಳ ಬಳಿಕ ಮೊದಲ ಬಾರಿ ಸರಣಿ ಸೋತಿದ್ದ ಪಾಕ್ ಸತತ ನಾಲ್ಕನೆ ಬಾರಿ ಆಸ್ಟ್ರೇಲಿಯ ವಿರುದ್ಧ 3-0 ಅಂತರದಿಂದ ವೈಟ್‌ವಾಶ್ ಅನುಭವಿಸಿತ್ತು. ಆಗ ಮಿಸ್ಬಾ ನಾಯಕತ್ವದ ಬಗ್ಗೆ ಅಪಸ್ವರ ಕೇಳಿಬಂದಿತ್ತು.
ಜಮೈಕಾದಲ್ಲಿ ಎ.21 ರಿಂದ ಪಾಕ್-ವಿಂಡೀಸ್ ನಡುವೆ ಟೆಸ್ಟ್ ಸರಣಿಯ ಮೊದಲ ಪಂದ್ಯ ನಡೆಯಲಿದ್ದು, ಎ.30 ಹಾಗೂ ಮೇ 10 ರಂದು ಇನ್ನೆರಡು ಪಂದ್ಯಗಳು ನಡೆಯಲಿದೆ.







