ಡೇವಿಸ್‌ಕಪ್‌ನಲ್ಲಿ ಲಿಯಾಂಡರ್ ಪೇಸ್‌ಗೆ ಸ್ಥಾನವಿಲ್ಲ

ಬೆಂಗಳೂರು, ಎ.6: ಉಜ್ಬೇಕಿಸ್ತಾನ ವಿರುದ್ಧ ಶುಕ್ರವಾರ ಆರಂಭವಾಗಲಿರುವ ಏಷ್ಯಾ/ಒಶಿಯಾನಿಯ ಡೇವಿಸ್ ಕಪ್ ಪಂದ್ಯಕ್ಕೆ ಪ್ರಕಟಿಸಲಾದ ಭಾರತ ತಂಡದಿಂದ ಹಿರಿಯ ಆಟಗಾರ ಲಿಯಾಂಡರ್ ಪೇಸ್‌ರನ್ನು ಹೊರಗಿಡಲಾಗಿದೆ. ಈ ಮೂಲಕ ಡೇವಿಸ್‌ಕಪ್‌ನ ಸ್ಟಾರ್ ಆಟಗಾರನಿಗೆ ಅವಮಾನ ಮಾಡಲಾಗಿದೆ.
ಎ.7 ರಿಂದ 9ರ ತನಕ ನಡೆಯಲಿರುವ ಡೇವಿಸ್‌ಕಪ್‌ನಲ್ಲಿ ಭಾಗವಹಿಸುವ ಉದ್ದೇಶದಿಂದ ಪೇಸ್ ಮೆಕ್ಸಿಕೋದಿಂದ ಬೆಂಗಳೂರಿಗೆ ಬಂದು ಈಗಾಗಲೇ ಅಭ್ಯಾಸವನ್ನು ಆರಂಭಿಸಿದ್ದರು. ಭಾರತದ ಡೇವಿಸ್‌ಕಪ್ ನಾಯಕ ಮಹೇಶ್ ಭೂಪತಿ ಅವರು ಪೇಸ್‌ರನ್ನು ಕೊನೆಯಕ್ಷಣದಲ್ಲಿ ಸಕಾರಣವಿಲ್ಲದೆ ತಂಡದಿಂದ ಕೈಬಿಟ್ಟು ಅವರ ಬದಲಿಗೆ ರೋಹನ್ ಬೋಪಣ್ಣರನ್ನು ಆಯ್ಕೆ ಮಾಡಿದ್ದಾರೆ. ಬೋಪಣ್ಣ ಡೇವಿಸ್‌ಕಪ್‌ನ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಶ್ರೀರಾಮ್ ಬಾಲಾಜಿ ಅವರೊಂದಿಗೆ ಡಬಲ್ಸ್ ಪಂದ್ಯವನ್ನು ಆಡಲಿದ್ದಾರೆ.
ಭಾರತದ ಹಿರಿಯ ಟೆನಿಸ್ ಪಟು ಪೇಸ್ 1990ರಲ್ಲಿ ಜೈಪುರದಲ್ಲಿ ನಡೆದಿದ್ದ ಡೇವಿಸ್‌ಕಪ್‌ನಲ್ಲಿ ಜಪಾನ್ ವಿರುದ್ಧ ಚೊಚ್ಚಲ ಪಂದ್ಯ ಆಡಿದ್ದರು. ಇದೀಗ 27 ವರ್ಷಗಳ ಬಳಿಕ ಮೊದಲ ಬಾರಿ ಡೇವಿಸ್ ಕಪ್ ತಂಡದಿಂದ ಪೇಸ್‌ರನ್ನು ಕೈಬಿಡಲಾಗಿದೆ. 42ರ ಹರೆಯದ ಪೇಸ್ ಇನ್ನೊಂದು ಪಂದ್ಯವಾಡಿದರೆ ಡೇವಿಸ್ ಕಪ್‌ನ ಇತಿಹಾಸದಲ್ಲಿ ಗರಿಷ್ಠ ಪಂದ್ಯಗಳನ್ನು ಆಡಿದ ದಾಖಲೆ ನಿರ್ಮಿಸುವ ಅವಕಾಶವಿತ್ತು. ತನ್ನ ಹಾಗೂ ಭೂಪತಿ ನಡುವಿನ ಭಿನ್ನಾಭಿಪ್ರಾಯವೇ ಈ ಬೆಳವಣಿಗೆಗೆ ಕಾರಣವಾಗಿರಬಹುದು ಎಂದು ಪೇಸ್ ಹೇಳಿದ್ದಾರೆ.
ಯೂಕಿ ಭಾಂಬ್ರಿ ಗಾಯಗೊಂಡು ಟೂರ್ನಿಯಿಂದ ಹೊರಗುಳಿದ ಹಿನ್ನೆಲೆಯಲ್ಲಿ ರಾಮ್‌ಕುಮಾರ್ ರಾಮನಾಥನ್ ಭಾರತದ ಸಿಂಗಲ್ಸ್ ಸವಾಲನ್ನು ಮುನ್ನಡೆಸಲಿದ್ದಾರೆ.
ಶುಕ್ರವಾರ ಇಲ್ಲಿ ಆರಂಭವಾಗಲಿರುವ ಡೇವಿಸ್‌ಕಪ್‌ನ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಟೆಮುರ್ ಇಸ್ಮೈಲೊವ್‌ರನ್ನು ಎದುರಿಸಲಿದ್ದಾರೆ. ಭಾಂಬ್ರಿ ಬದಲಿಗೆ ತಂಡಕ್ಕೆ ಆಯ್ಕೆಯಾಗಿರುವ ಗುಣೇಶ್ವರನ್ ಎರಡನೆ ಸಿಂಗಲ್ಸ್ ಪಂದ್ಯದಲ್ಲಿ ಸಂಜರ್ ಫೆಝೀವ್‌ರನ್ನು ಎದುರಿಸಲಿದ್ದಾರೆ.
ರವಿವಾರ ರಿವರ್ಸ್ ಸಿಂಗಲ್ಸ್ ಪಂದ್ಯ ನಡೆಯಲಿದ್ದು, ರಾಮನಾಥನ್ ಅವರು ಫಝೀವ್‌ರನ್ನು ಹಾಗೂ ಗುಣೇಶ್ವರನ್ ಅವರು ಇಸ್ಮೈಲೊವ್‌ರನ್ನು ಎದುರಿಸಲಿದ್ದಾರೆ.







