ಅಲ್ವಾರ್ ಹತ್ಯೆ: ಪೆಹ್ಲೂ ಸಾವಿಗೆ ಹಲ್ಲೆ ಕಾರಣ

ಅಲ್ವಾರ್, ಎ.7: ಗೋರಕ್ಷಕರಿಂದ ತೀವ್ರ ಹಲ್ಲೆಗೊಳಗಾಗಿ ಸೋಮವಾರ ಮೃತಪಟ್ಟ ಪೆಹ್ಲೂ ಖಾನ್ ಅವರ ಸಾವಿಗೆ ಅವರ ಮೇಲೆ ನಡೆದ ತೀವ್ರ ಹಲ್ಲೆಯೇ ಕಾರಣ ಎಂದು ಶವದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಿದ ಮೂವರು ವೈದ್ಯರ ತಂಡದಲ್ಲಿದ್ದ ಡಾ.ಪುಷ್ಪೇಂದ್ರ ಜೈನ್ ಪ್ರಕಾರ, "ಸಾವಿಗೆ ಮೂಲ ಕಾರಣ ಹಲ್ಲೆಯ ವೇಳೆ ಆದ ಗಾಯ. ಹೃದಯಾಘಾತ ಪೂರಕ ಕಾರಣ. ಇದನ್ನು ಮರಣೋತ್ತರ ಪರೀಕ್ಷೆ ವರದಿಯಲ್ಲೂ ಸ್ಪಷ್ಟಪಡಿಸಲಾಗಿದೆ"
ಇದಕ್ಕೂ ಮುನ್ನ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದ ಕೈಲಾಶ್ ಆಸ್ಪತ್ರೆಯ ಅನಸ್ತೇಶಿಯಾ ಸಲಹಾ ತಜ್ಞ ಡಾ.ಅಖಿಲ್ ಕುಮಾರ್ ಸಕ್ಸೇನಾ, ಪೆಹ್ಲೂ ಸಾವಿಗೆ ಹೃದಯಾಘಾತ ಕಾರಣ ಎಂದು ಹೇಳಿಕೆ ನೀಡಿದ್ದರು. ಇತರರಿಗೆ ಆದ ಗಾಯದಿಂದ ಆಘಾತಗೊಂಡ ಪೆಹ್ಲೂಖಾನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಆದರೆ ಈ ಗಾಯವೇ ಹೃದಯಾಘಾತಕ್ಕೆ ಕಾರಣ ಎಂದು ಮರಣೋತ್ತರ ಪರೀಕ್ಷೆ ವರದಿ ಸ್ಪಷ್ಟಪಡಿಸಿದೆ. "ಮೃತದೇಹವನ್ನು ಪರಿಶೀಲಿಸಿದಾಗ ಹೃದಯಾಘಾತಕ್ಕೆ ಮುಖ್ಯ ಕಾರಣ ಆತನಿಗೆ ಆದ ಗಾಯ ಎನ್ನುವುದು ದೃಢಪಟ್ಟಿದೆ. ಆ ಗಾಯ, ವ್ಯಕ್ತಿಯ ಸಾವಿಗೆ ಕಾರಣವಾಗುವಷ್ಟು ಪ್ರಬಲವಾಗಿತ್ತು. ರೋಗಪತ್ತೆ ಶಾಸ್ತ್ರ ವಿಭಾಗ ಯಾವುದೇ ವಿಷಪ್ರಾಶನ ನಡೆದಿಲ್ಲ ಎಂದು ದೃಢೀಕರಿಸಿದೆ" ಎಂದು ವರದಿ ಹೇಳಿದೆ.





