ಜೈಲಿನಿಂದ ಬಿಡುಗಡೆಯಾಗಲು ಪಾಕಿಸ್ತಾನ ಸಹೋದರಿಯರಿಗೆ ಎನ್‌ಜಿಒ ನೆರವು

ಅಮೃತಸರ, ಎ.7: ಮಾದಕ ದ್ರವ್ಯ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ 10 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ಪಾಕಿಸ್ತಾನದ ಸಹೋದರಿಯರು ಅಮೃತಸರದ ಜೈಲಿನಿಂದ ಬಿಡುಗಡೆಯಾಗಲು ಬಟಾಲ ಮೂಲದ ‘ಸರ್ಬತ್ ಡಾ ಭಾಲಾ’ ಎಂಬ ಹೆಸರಿನ ಎನ್‌ಜಿಒವೊಂದು ಭಾರತದ ನ್ಯಾಯಾಲಯಕ್ಕೆ ನಾಲ್ಕು ಲಕ್ಷ ರೂ.ಪಾವತಿಸಿ ಮಾನವೀಯತೆ ಮೆರೆದಿದೆ. .
ಪಾಕಿಸ್ತಾನದ ಮಹಿಳೆ ಫಾತಿಮಾ ಹಾಗೂ ಅವರ ಸಹೋದರಿ ಮುಮ್ತಾಜ್‌ರನ್ನು 2006ರಲ್ಲಿ ಅಟ್ಟಾರಿ ರೈಲ್ವೇ ಸ್ಟೇಶನ್‌ನಲ್ಲಿ ಬಂಧಿಸಲಾಗಿತ್ತು. ಈ ಇಬ್ಬರು ಸಂಜೋತಾ ಎಕ್ಸ್‌ಪ್ರೆಸ್ ರೈಲಿನ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದರು. ಈ ಇಬ್ಬರ ಬಳಿ ಮಾದಕ ದ್ರವ್ಯ ಪತ್ತೆಯಾಗಿತ್ತು. ಇಬ್ಬರು ಮಹಿಳೆಯರು ತಪ್ಪಿತಸ್ಥರೆಂದು ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರಿಗೂ ತಲಾ 2 ಲಕ್ಷ ರೂ. ದಂಡ ವಿಧಿಸುವಂತೆ ನ್ಯಾಯಾಲಯ ಆದೇಶಿಸಿದ್ದು, ದಂಡ ವಿಧಿಸಲು ವಿಫಲರಾದರೆ ಜೈಲು ಶಿಕ್ಷೆ ಮುಂದುವರಿಯಲಿದೆ ಎಂದು ತಿಳಿಸಿತ್ತು. ಈ ಇಬ್ಬರ ಜೈಲು ಶಿಕ್ಷೆಯ ಅವಧಿ ಕಳೆದ ವರ್ಷದ ನವೆಂಬರ್‌ನಲ್ಲಿ ಮುಗಿದಿದೆ. ಫಾತಿಮಾ ಬಂಧಿಸಲ್ಪಟ್ಟಾಗ ತುಂಬು ಗರ್ಭಿಣಿಯಾಗಿದ್ದು, ಜೈಲಿನಲ್ಲೇ ಹೀನಾ ಎಂಬ ಹೆಸರಿನ ಮಗುವಿಗೆ ಜನ್ಮ ನೀಡಿದ್ದರು. ಆ ಹೆಣ್ಣುಮಗುವಿಗೆ ಈಗ ಹತ್ತು ವರ್ಷ.
ಎನ್‌ಜಿಒ ಸೆಂಟ್ರಲ್ ಜೈಲಿನ ಬ್ಯಾಂಕ್ ಖಾತೆಯಲ್ಲಿ ಹಣ ಜಮೆ ಮಾಡಿ ವಕೀಲೆ ನವಜೋತ್ ಕೌರ್ ಉಪಸ್ಥಿತಿಯಲ್ಲಿ ಜೈಲು ಅಧಿಕಾರಿಗಳಿಗೆ ಪಾವತಿ ರಶೀದಿಯನ್ನು ಹಸ್ತಾಂತರಿಸಲಾಗಿದೆ.
‘‘ಪಾಕ್ ಸಹೋದರಿಯರು ಜೈಲಿನಿಂದ ಬಿಡುಗಡೆಯಾಗಲು ಅರ್ಹರಿದ್ದಾರೆ. ಆದರೆ,ಕೆಲವೊಂದು ನಿಯಮಾವಳಿಗಳು ಇನ್ನಷ್ಟೇ ಪೂರ್ಣವಾಗಬೇಕು. ಪ್ರಕರಣದ ಕಡತವನ್ನು ಗೃಹ ಸಚಿವಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ಆ ಬಳಿಕ ವಿದೇಶಿ ಸಚಿವರು ಈ ವಿಷಯವನ್ನು ಪಾಕಿಸ್ತಾನ ಹೈಕಮಿಶನ್‌ನ ಗಮನಕ್ಕೆ ತರಲಿದ್ದಾರೆ. ಫಾತಿಮಾರ 10 ವರ್ಷ ಪುತ್ರಿ ಬಾರತದ ಜೈಲಿನಲ್ಲಿ ಜನಿಸಿದ್ದು, ಹುಟ್ಟುವಾಗ ಆಕೆ ಭಾರತೀಯ ಪ್ರಜೆಯಾಗಿದ್ದರೂ ಪಾಕಿಸ್ತಾನ ಸರಕಾರ ಈ ಬಗ್ಗೆ ಸೂಕ್ತ ಹೆಜ್ಜೆ ಇಡಬೇಕು. ಬಾಲಕಿಗೆ ತಾಯಿಯೊಂದಿಗೆ ಪಾಕಿಸ್ತಾನಕ್ಕೆ ತೆರಳಲು ಯಾವುದೇ ಸಮಸ್ಯೆಯಾಗದು ಎಂದು ಸಾಮಾಜಿಕ ಸಂಘಟನೆಯ ಅಧ್ಯಕ್ಷೆ, ವಕೀಲೆ ನವಜೋತ್ ಕೌರ್ ಹೇಳಿದ್ದಾರೆ.