ಮಂಗಳೂರು ಪೊಲೀಸ್ ದೌರ್ಜನ್ಯ: ಎಸ್‌ಡಿಪಿಐ ನೀಯೋಗದಿಂದ ಸಿಎಂ ಭೇಟಿ

ಮಂಗಳೂರು, ಎ.7: ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಮೈಸೂರಿನ ಅವರ ನಿವಾಸದಲ್ಲಿಂದು ಬೆಳಗ್ಗೆ ಭೇಟಿಯಾದ ಎಸ್‌ಡಿಪಿಐ ನಿಯೋಗವು ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪೊಲೀಸ್ ದೌರ್ಜನ್ಯದ ಕುರಿತಂತೆ ಚರ್ಚಿಸಿತು.
ಮಂಗಳೂರಿನ ಸಿಸಿಬಿ ಪೊಲೀಸರು ಅಮಾಯಕ ಮುಸ್ಲಿಂ ಯುವಕ ಅಹ್ಮದ್ ಖುರೇಷಿಗೆ ಅಮಾನವೀಯವಾಗಿ ಎರಡು ಕಿಡ್ನಿ ವೈಫಲ್ಯವಾಗುವವರೆಗೆ ದೈಹಿಕ ದೌರ್ಜನ್ಯ ನಡೆಸಿದ ಬಗ್ಗೆ ಮತ್ತು ಅದನ್ನು ವಿರೋಧಿಸಿ ಶಾಂತ ರೀತಿಯಲ್ಲಿ ಪ್ರತಿಭಟಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಯಾವುದೇ ಮುನ್ಸೂಚನೆ ನೀಡದೆ ಲಾಠಿಚಾರ್ಜ್ ನಡೆಸಿ ಬಂಧಿಸಿರುವ ಬಗ್ಗೆ ಮುಖ್ಯಮಂತ್ರಿಯವರಿಗೆ ನಿಯೋಗವು ವಿವರಿಸಿತು.
ಈ ಸಂದರ್ಭ ಲಾಠಿಚಾರ್ಜ್‌ನ ವೀಡಿಯೊ ತುಣುಕನ್ನು ಸಹ ಮುಖ್ಯಮಂತ್ರಿಯವರ ಗಮನಕ್ಕೆ ತರಲಾಯಿತು.
ಖುರೇಷಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮಂಗಳೂರು ಸಿಸಿಬಿ ಪೊಲೀಸ್ ಅಧಿಕಾರಿ ಹಾಗೂ ಪೇದೆಗಳನ್ನು ಅಮಾನತುಗೊಳಿಸಿ ಅವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಬೇಕು, ಶಾಂತಿಯುತ ಪ್ರತಿಭಟನೆ ನಡೆಸಿದವರ ಮೇಲೆ ಹಾಕಿರುವ ಸುಳ್ಳು ಮೊಕದ್ದಮೆಗಳನ್ನು ಹಿಂಪಡೆಯಬೇಕು. ಖುರೈಶಿಯ ಆಸ್ಪತ್ರೆಯ ಸಂಪೂರ್ಣ ವೆಚ್ಚವನ್ನು ಸರಕಾರ ಭರಿಸಬೇಕು ಹಾಗೂ ಆತನಿಗೆ ಸೂಕ್ತ ಪರಿಹಾರವನ್ನು ನೀಡಲು ಕ್ರಮ ಕೈಗೊಳ್ಳುವಂತೆ ನಿಯೋಗವು ಮುಖ್ಯಮಂತ್ರಿಗೆ ಮನವಿ ಮಾಡಿತು.
ಇದಕ್ಕೆ ಪೂರಕವಾಗಿ ಸ್ಪಂದಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.
ನಿಯೋಗದಲ್ಲಿ ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ರಾಜ್ಯ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ಎಸ್‌ಡಿಪಿಐ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮ್ಜದ್ ಖಾನ್, ಬಂಟ್ವಾಳ ಪುರಸಭಾ ಸದಸ್ಯ ಇಕ್ಬಾಲ್ ಐ.ಎಂ.ಆರ್. ಉಪಸ್ಥಿತರಿದ್ದರು.







