ಹಿಂದು ಹುಡುಗಿಯನ್ನು ಪ್ರೇಮಿಸಿದ್ದಕ್ಕಾಗಿ ಮುಸ್ಲಿಂ ಯುವಕನನ್ನು ಥಳಿಸಿ ಕೊಂದರು

ರಾಂಚಿ,ಎ.7: ಹಿಂದು ಹುಡುಗಿಯನ್ನು ಪ್ರೇಮಿಸಿದ ‘ತಪ್ಪಿಗಾಗಿ’ 20ರ ಹರೆಯದ ಮುಸ್ಲಿಂ ಯುವಕನನ್ನು ಮರಕ್ಕೆ ಕಟ್ಟಿ ಹಾಕಿ,ಹಿಗ್ಗಾಮುಗ್ಗಾ ಥಳಿಸಿ ಕೊಂದು ಹಾಕಿದ ಘಟನೆ ಜಾರ್ಖಂಡ್‌ನ ಗುಮ್ಲಾದಲ್ಲಿ ನಡೆದಿದೆ.
ಗುಮ್ಲಾದ ರಝಾ ಕಾಲನಿ ನಿವಾಸಿ ಮೊಹಮ್ಮದ್ ಶಾಲಿಕ್ ಕಳೆದೊಂದು ವರ್ಷದಿಂದಲೂ ಸಮೀಪದ ಸೊಸೊ ಗ್ರಾಮದ ಹಿಂದು ಯುವತಿಯನ್ನು ಪ್ರೇಮಿಸುತ್ತಿದ್ದ.
ಬುಧವಾರ ಗುಮ್ಲಾದಲ್ಲಿ ರಾಮನವಮಿ ಮೆರವಣಿಗೆಯ ಸಂದರ್ಭ ಅಲ್ಲಿಗೆ ಬಂದು ತನ್ನನ್ನು ಭೇಟಿಯಾಗುವಂತೆ ಯುವತಿ ಶಾಲಿಕ್‌ಗೆ ಕರೆ ಮಾಡಿ ತಿಳಿಸಿದ್ದಳು. ತೊಂದರೆಯಾಗಬಹುದು ಎಂದು ಆತಂಕ ಹೊಂದಿದ್ದ ಶಾಲಿಕ್ ಆರಂಭದಲ್ಲಿ ನಿರಾಕರಿಸಿದ್ದನಾದರೂ ಬಳಿಕ ಅಲ್ಲಿಗೆ ತೆರಳಿ ಪ್ರಿಯತಮೆಯನ್ನು ಭೇಟಿಯಾಗಿ ತನ್ನ ಸ್ಕೂಟಿಯಲ್ಲಿ ಆಕೆಯನ್ನು ಮನೆಗೆ ತಲುಪಿಸಿದ್ದ.
ಈ ವೇಳೆ ಶಾಲಿಕ್‌ನನ್ನು ಕಂಡ ನೆರೆಕರೆಯವರು ಆತನನ್ನು ಸುತ್ತುವರಿದು ಮರವೊಂದಕ್ಕೆ ಕಟ್ಟಿ ಹಾಕಿ ಗಂಟೆಗಳ ಕಾಲ ಥಳಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಶಾಲಿಕ್ ಗುರುವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿರುವ ಪೊಲೀಸರು ಅನಾಮಿಕ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆಯು ಮುಂದುವರಿದಿದ್ದು, ಯುವತಿಯನ್ನು ಭೇಟಿಯಾಗದಂತೆ ಮತ್ತು ಗ್ರಾಮಕ್ಕೆಂದೂ ಕಾಲಿಡದಂತೆ ಈ ಹಿಂದೆ ಯುವಕನಿಗೆ ತಾಕೀತು ಮಾಡಲಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾಗಿ ಗುಮ್ಲಾ ಎಸ್‌ಪಿ ಚಂದನ್ ಕುಮಾರ ಝಾ ತಿಳಿಸಿದರು.
ನೆರೆಯ ಉತ್ತರ ಪ್ರದೇಶದಲ್ಲಿ ಸರಣಿ ವಿವಾದಾತ್ಮಕ ಉಪಕ್ರಮಗಳ ಬಳಿಕ ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಮು ಉದ್ವಿಗ್ನತೆಯ ನಡುವೆಯೇ ಈ ಆಘಾತಕಾರಿ ಘಟನೆ ನಡೆದಿದೆ. ರೋಮಿಯೊ ನಿಗ್ರಹ ದಳಗಳನ್ನು ಸ್ಥಾಪಿಸುವ ಮತ್ತು ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸುವ ಜಾರ್ಖಂಡ್ ನಿರ್ಧಾರದ ವಿರುದ್ಧ ಸಿಡಿದೆದ್ದಿರುವ ಸಾಮಾಜಿಕ ಕಾರ್ಯಕರ್ತರು, ಇದು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡಿರುವುದುನ್ಯಾಯಯುತವಲ್ಲ ಎಂದು ಹೇಳಿದ್ದಾರೆ.
ಶಾಲಿಕ್ ಹತ್ಯೆಯ ಬಳಿಕ ಗುಮ್ಲಾ ಪಟ್ಟಣದಲಿ ಉದ್ವಿಗ್ನತೆ ತಲೆದೋರಿದ್ದು, ನೂರಾರು ಪೊಲೀಸರನ್ನು ನಿಯೋಜಿಸಿ ಯಾವುದೇ ಹಿಂಸಾಚಾರ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಝಾ ತಿಳಿಸಿದರು.
ಸೊಸೊ ಗ್ರಾಮದಲ್ಲಿ ತನ್ನ ಮಗನನ್ನು ಥಳಿಸಿ ಮರಕ್ಕೆ ಕಟ್ಟಿಹಾಕಲಾಗಿದೆ ಎಂದು ಬುಧವಾರ ರಾತ್ರಿ ಇಬ್ಬರು ವ್ಯಕ್ತಿಗಳು ತನ್ನ ಮನೆಗೆ ಬಂದು ಮಾಹಿತಿ ನೀಡಿದ್ದರು. ತಾನು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿ ಸ್ಥಳಕ್ಕೆ ಧಾವಿಸಿದಾಗ ಶಾಲಿಕ್ ತೀವ್ರವಾಗಿ ಗಾಯಗೊಂಡಿದ್ದು ಕಂಡು ಬಂದಿತ್ತು. ಆತನನ್ನು ತಕ್ಷಣ ಸದರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಹೆಚ್ಚಿನ ಚಿಕಿತ್ಸೆಗಾಗಿ ರಾಂಚಿಯ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ ಎಂದು ಮೃತನ ತಂದೆ ಮುಹಮ್ಮದ್ ಮಿನ್ಹಾಜ್ ಹೇಳಿದರು.







