ಶಿವಸೇನೆ ಸಂಸದನ ವಿಮಾನಯಾನಕ್ಕೆ ಮತ್ತೆ ಅವಕಾಶ ನಿರಾಕರಿಸಿದ ಏರ್‌ಇಂಡಿಯಾ

ಹೊಸದಿಲ್ಲಿ,ಎ.7:ತನ್ನ ವಿಮಾನದಲ್ಲಿ ಪ್ರಯಾಣಿಸಲು ಶಿವಸೇನೆಯ ಸಂಸದ ರವೀಂದ್ರ ಗಾಯಕವಾಡ್‌ಗೆ ಶುಕ್ರವಾರ ಮತ್ತೆ ಅನುಮತಿಯನ್ನು ನಿರಾಕರಿಸಿದ ಏರ್ ಇಂಡಿಯಾ ಎ.17 ಮತ್ತು 24ರಂದು ದಿಲ್ಲಿ-ಮುಂಬೈ ನಡುವೆ ಪ್ರಯಾಣಿಸಲು ಅವರು ಬುಕ್ ಮಾಡಿದ್ದ ಎರಡು ಟಿಕೆಟ್‌ಗಳನ್ನು ರದ್ದುಗೊಳಿಸಿದೆ. ಮಾ.23ರಂದು ಏರ್ ಇಂಡಿಯಾದ ಹಿರಿಯ ಅಧಿಕಾರಿಯೋರ್ವರನ್ನು ಥಳಿಸಿದ ಬಳಿಕ ಏರ್‌ಇಂಡಿಯಾದ ನೇತೃತ್ವದಲ್ಲಿ ದೇಶಿಯ ವಿಮಾನಯಾನ ಸಂಸ್ಥೆಗಳು ಮಹಾರಾಷ್ಟ್ರದ ಒಸ್ಮಾನಾಬಾದ ಕ್ಷೇತ್ರದ ಸಂಸದರಾಗಿರುವ ಗಾಯಕವಾಡ್ ಮೇಲೆ ನಿಷೇಧ ಹೇರಿವೆ. ಇಂದಿನದು ವಿಮಾನದಲ್ಲಿ ಪ್ರಯಾಣಿಸಲು ಗಾಯಕವಾಡ್ ನಡೆಸಿದ ಏಳನೇ ವಿಫಲ ಯತ್ನವಾಗಿದೆ.
ಗುರುವಾರ ಸಂಸತ್ತಿನಲ್ಲಿ ಹಲ್ಲೆ ಘಟನೆಯ ಕುರಿತು ತನ್ನ ಹೇಳಿಕೆಯನ್ನು ನೀಡಿದ್ದ ಗಾಯಕವಾಡ್ ಬಳಿಕ ನಾಗರಿಕ ವಾಯುಯಾನ ಸಚಿವ ಅಶೋಕ ಗಜಪತಿ ರಾಜು ಅವರಿಗೆ ಪತ್ರ ಬರೆದು ‘ದುರದೃಷ್ಟಕರ ಘಟನೆ ’ಯ ಬಗ್ಗೆ ‘ವಿಷಾದ ’ವ್ಯಕ್ತಪಡಿಸಿದ್ದರು. ಆದರೆ ಏರ್ ಇಂಡಿಯಾ ಅಥವಾ ತನ್ನಿಂದ ಹಲ್ಲೆಗಿಡಾಗಿದ್ದ ಸಿಬ್ಬಂದಿಯ ಕ್ಷಮೆ ಯಾಚಿಸುವ ಗೋಜಿಗೆ ಹೋಗಿರಲಿಲ್ಲ.
ಗಾಯಕವಾಡ್ ಬೇಷರತ್ ಕ್ಷಮೆಯನ್ನು ಯಾಚಿಸುವವರೆಗೂ ಅವರಿಗೆ ವಿಮಾನ ಯಾನಕ್ಕೆ ಅವಕಾಶ ನೀಡಬಾರದು ಎಂದು ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿಗಳ ಸಂಘವು ಪ್ರತಿಕ್ರಿಯಿಸಿದೆ. ಇಂಡಿಯನ್ ಕಮರ್ಷಿಯಲ್ ಪೈಲಟ್ಸ್ ಅಸೋಷಿಯೇಷನ್ ಕೂಡ ಇಂತಹುದೇ ಆಗ್ರಹವನ್ನು ಮಂಡಿಸಿದೆ.







