ರಾತ್ರಿ ಗಸ್ತು ಪೊಲೀಸರಿಗೆ ಆತ್ಮರಕ್ಷಣಾ ಆಯುಧ: ಪೊಲೀಸ್ ಆಯುಕ್ತ ಚಂದ್ರಶೇಖರ್
ಎಎಸ್ಸೈ ಐತಪ್ಪರ ಕೊಲೆಯತ್ನ ಪ್ರಕರಣ: ಇಬ್ಬರು ನ್ಯಾಯಾಲಯಕ್ಕೆ ಹಾಜರು

ಮಂಗಳೂರು, ಎ.7: ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ರಾತ್ರಿ ಗಸ್ತು ಪೊಲೀಸರಿಗೆ ಆತ್ಮರಕ್ಷಣಾ ಆಯುಧ ನೀಡಲಾಗುವುದು ಎಂದು ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ತಿಳಿಸಿದ್ದಾರೆ.
ಶುಕ್ರವಾರ ಪೊಲೀಸ್ ಆಯುಕ್ತಾಲಯ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉರ್ವ ಠಾಣಾ ಎಎಸ್ಸೈ ಐತಪ್ಪ ಬುಧವಾರ ಮುಂಜಾನೆ ಕರ್ತವ್ಯದಲ್ಲಿದ್ದಾಗ ಯಾವುದೇ ಆಯುಧವನ್ನು ಬಳಸಿರಲಿಲ್ಲ. ಸಾಮಾನ್ಯವಾಗಿ ರಾತ್ರಿ ಗಸ್ತಿಗೆ ಇಬ್ಬರು ಪೊಲೀಸರು ಜೊತೆಯಾಗಿ ಹೋಗಬೇಕಾಗುತ್ತದೆ. ಆ ಪೈಕಿ ಒಬ್ಬ ಪೊಲೀಸ್ ಬಳಿ ರಿವಾಲ್ವರ್ ಅಥವಾ ರೈಫಲ್ ಇರಬೇಕು. ದುಷ್ಕೃತ್ಯ ನಡೆದ ದಿನ ಐತಪ್ಪರ ಬಳಿ ಆಯುಧವಿದ್ದಿದ್ದರೆ ಅವರು ಅಪಾಯವನ್ನು ತಪ್ಪಿಸಬಹುದಿತ್ತು. ಭವಿಷ್ಯದ ಹಿತದೃಷ್ಟಿಯಿಂದ ರಾತ್ರಿ ಗಸ್ತು ಪೊಲೀಸರಿಗೆ ಆತ್ಮರಕ್ಷಣಾ ಆಯುಧ ನೀಡಲಾಗುವುದು ಎಂದರು.
ಇಬ್ಬರು ನ್ಯಾಯಾಲಯಕ್ಕೆ ಹಾಜರು:
ಎ.5ರ ಮುಂಜಾನೆ 3:20ಕ್ಕೆ ಉರ್ವ ಎಎಸ್ಸೈ ಐತಪ್ಪ ಅವರನ್ನು ನಗರದ ಲೇಡಿಹಿಲ್ ವೃತ್ತದ ಬಳಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಕಾಟಿಪಳ್ಳ 2ನೆ ಬ್ಲಾಕ್ ನಿವಾಸಿ ಶಮೀರ್ (28) ಮತ್ತು ಸುರತ್ಕಲ್ ಕಾನ ನಿವಾಸಿ ಮುಹಮ್ಮದ್ ನಿಯಾಝ್ (20) ಎಂಬವರನ್ನು ಗುರುವಾರ ರಾತ್ರಿ 8 ಗಂಟೆಗೆ ಬಂಧಿಸಲಾಗಿದೆ. (ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಹೆಚ್ಚುವರಿ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು)ಎಂದರು.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಬೈಕನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು. ಶಮೀರ್ ವಿರುದ್ಧ ಈಗಾಗಲೆ ಕೊಣಾಜೆ, ಬರ್ಕೆ, ಮುಲ್ಕಿ, ಸುರತ್ಕಲ್ ಠಾಣೆಗಳಲ್ಲಿ 9 ಮಂದಿ ಮತ್ತು ನಿಯಾಝ್ ವಿರುದ್ಧ ಬಂಟ್ವಾಳ, ಕಾರ್ಕಳ, ಸುರತ್ಕಲ್, ಶಿವಮೊಗ್ಗ, ಕೊಣಾಜೆ ಠಾಣೆಗಳಲ್ಲಿ 5 ಪ್ರಕರಣ ದಾಖಲಾಗಿದೆ. ಇದೀಗ ಎಎಸ್ಸೈ ಕೊಲೆಯತ್ನಕ್ಕೆ ಸಂಬಂಧಿಸಿ ಸೆ. 307 ಮತ್ತು ಸೆ.332ರ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದರು.
ತನಿಖೆ ಚುರುಕು:
ಫೆ.21ರಂದು ಬಜ್ಪೆ ಕಳವಾರಿನಲ್ಲಿ ಪ್ರಕಾಶ್ ಪೂಜಾರಿ ಹತ್ಯೆಗೆ ಸಂಬಂಧಿಸಿ ಶಮೀರ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಗ್ಗೆ ಮಂಗಳೂರು ಸೆಂಟ್ರಲ್ ಉಪವಿಭಾಗದ ಎಸಿಪಿ ಉದಯ ನಾಯಕ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ವಿಚಾರಣೆಯ ಬಳಿಕ ಕೃತ್ಯದ ಹಿಂದಿನ ಉದ್ದೇಶ ಬೆಳಕಿಗೆ ಬರಲಿದೆ ಎಂದು ಚಂದ್ರಶೇಖರ್ ತಿಳಿಸಿದರು.
ಖುರೈಷಿ ಕಿಡ್ನಿ ವೈಫಲ್ಯ ಪ್ರಕರಣ:
ವೈದ್ಯಕೀಯ ವರದಿಯಂತೆ ಖುರೈಷಿಯ ಮೇಲೆ ಯಾವುದೇ ಪೊಲೀಸ್ ದೌರ್ಜನ್ಯ ನಡೆದಿಲ್ಲ. ಖರೈಷಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗಲೂ ಆತ ಈ ಬಗ್ಗೆ ಹೇಳಿಕೆ ನೀಡಿದ್ದಾನೆ. ಖುರೈಷಿಯ ಸಹೋದರ ನಿಷಾದ್ ನೀಡಿದ ದೂರಿನಂತೆ ಪೊಲೀಸ್ ದೌರ್ಜನ್ಯದ ಬಗ್ಗೆ ಡಿಸಿಪಿ ಕೆ. ಎಂ. ಶಾಂತರಾಜು ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದು ಚಂದ್ರಶೇಖರ್ ಹೇಳಿದರು.
ಪತ್ರಕರ್ತರಿಗೆ ಬೆದರಿಕೆ ಹಿನ್ನೆಲೆ:
ಪಿಎಫ್‌ಐ ಕಾರ್ಯಕರ್ತರಿಗೆ ಲಾಠಿಜಾರ್ಜ್ ನಡೆದ ಬಳಿಕ ಫೇಸ್‌ಬುಕ್‌ನ ಮಂಗಳೂರು ಮುಸ್ಲಿಂ ಪೇಜ್‌ನಲ್ಲಿ ನಡೆಯುವ ಚರ್ಚೆ ಕುರಿತು ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಆಯುಕ್ತ ಚಂದ್ರಶೇಖರ್, ಈ ಬಗ್ಗೆ ಕೇಂದ್ರ ಐಟಿ ಸಚಿವಾಲಯದ ಗಮನಕ್ಕೆ ತಂದು ಈ ಪೇಜ್ ಬ್ಲಾಕ್ ಮಾಡುವ ಬಗ್ಗೆ ಕ್ರಮ ಜರಗಿಸಲಾಗುವುದು ಎಂದರು.
ಇದೇ ವಿಚಾರವಾಗಿ ಪತ್ರಕರ್ತರಿಗೆ ಬೆದರಿಕೆ ಕರೆ ಬಂದ ಬಗ್ಗೆ ಪ್ರತಿಕ್ರಿಯಿಸಿದ ಚಂದ್ರಶೇಖರ್, ಈ ಬಗ್ಗೆ ದೂರು ನೀಡಿದರೆ ಕ್ರಮ ಜರಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಡಾ.ಎಂ.ಸಂಜೀವ ಪಾಟೀಲ್ ಉಪಸ್ಥಿತರಿದ್ದರು.







