6 ಕಿಲೋ ಗಾಂಜಾ ಸಹಿತ ಇಬ್ಬರು ವಶಕ್ಕೆ

ಕಾಸರಗೋಡು, ಎ.7: ಕಾರುಗಳಲ್ಲಿ ಸಾಗಾಟ ಮಾಡುತ್ತಿದ್ದ ಆರು ಕಿಲೋ ಗಾಂಜಾ ಸಹಿತ ಎಂಬಿಎ ವಿದ್ಯಾರ್ಥಿ ಸೇರಿದಂತೆ ಇಬ್ಬರನ್ನು ನಾರ್ಕೋಟಿಕ್ ದಳದ ಸಿಬ್ಬಂದಿ ಬಂಧಿಸಿದ್ದಾರೆ. ಕಾರಲ್ಲಿದ್ದ ಮೂವರು ಪರಾರಿಯಾಗಿದ್ದಾರೆ.
ಬಂಧಿತರನ್ನು ಚಟ್ಟಂಚಾಲ್ ಆರಾಮಂಗಾನದ ಅಹ್ಮದ್ ಯಾನೆ ಅಮು ( 30, ಮಂಗಳೂರಿನ ಎಂಬಿಎ ವಿದ್ಯಾರ್ಥಿ) ಕೊಲ್ಲಂನ ಶಿಬಿನ್ (25) ಎಂದು ಗುರುತಿಸಲಾಗಿದೆ. ಚಟ್ಟಂಚಾಲ್ ನ ರಫೀಕ್ , ಕೊಲ್ಲಂನ ರಾಹುಲ್ ಸೇರಿದಂತೆ ಮೂವರು ತಪ್ಪಿಸಿ ಪರಾರಿಯಾಗಿದ್ದಾರೆ .
ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯಂತೆ ನಾರ್ಕೋಟಿಕ್ ಸೆಲ್ ಅಧಿಕಾರಿಗಳು ಮುಳ್ಳೇರಿಯಾದಿಂದ ಎರಡು ಕಾರನ್ನು ವಶಪಡಿಸಿ ಕೊಂಡು ಇಬ್ಬರನ್ನು ಬಂಧಿಸಿದರು. ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಲೆತ್ನಿಸಿದರೂ ಬೆನ್ನಟ್ಟಿದ ಪೊಲೀಸರು ಅವರನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಒಂದು ಕಾರಿನಲ್ಲಿದ್ದ ಇಬ್ಬರನ್ನು ಬಂಧಿಸಿದರೂ ಇನ್ನೊಂದು ಕಾರಿನಲ್ಲಿದ್ದ ಮೂವರು ಕಾರು ಬಿಟ್ಟು ಪರಾರಿಯಾದರು ಎನ್ನಲಾಗಿದೆ.
ಕಾರನ್ನು ತಪಾಸಣೆ ನಡೆಸಿದಾಗ ಹಿಂದಿನ ಕಾರಿನಲ್ಲಿ ಆರು ಕಿಲೋ ಗಾಂಜಾ ಪತ್ತೆಯಾಗಿದೆ. ಗಾಂಜಾವನ್ನು ಇಡುಕ್ಕಿಯಿಂದ ತಂದುದಾಗಿ ಬಂದಿತರು ತಪ್ಪೊಪ್ಪಿಕೊಂಡಿದ್ದಾರೆ. ಕಾರುಗಳನ್ನು ಬಾಡಿಗೆಗೆ ಪಡೆದು ಗಾಂಜಾ ಸಾಗಾಟ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.





