ನಿರಾಶ್ರಿತರಿಗೆ ದಿಡ್ಡಳ್ಳಿಯಲ್ಲೇ ಭೂಮಿ ನೀಡಬೇಕು: ಜಿಗ್ನೇಶ್ ಮೆವಾನಿ
ಬೆಂಗಳೂರು ಚಲೋಗೆ ಚಾಲನೆ

ಸಿದ್ದಾಪುರ, ಎ.7: ರಾಜ್ಯದ ಕಾಂಗ್ರೆಸ್ ಹಾಗೂ ಕೇಂದ್ರದ ಬಿಜೆಪಿ ಸರಕಾರಗಳ ಹೊಂದಾಣಿಕೆಯ ಫಲವಾಗಿ ದಿಡ್ಡಳ್ಳಿ ಆದಿವಾಸಿಗಳ ಗುಡಿಸಲು ತೆರವು ಮಾಡಲಾಗಿದೆ ಎಂದು ಗುಜರಾತಿನ ಹೋರಾಟಗಾರ ಜಿಗ್ನೇಶ್ ಮೆವಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ದಿಡ್ಡಳ್ಳಿಯಿಂದ ಪ್ರಾರಂಭವಾದ 'ಬೆಂಗಳೂರು ಚಲೋ' ಹೋರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಡಿಸಂಬರ್ 7ರ ಬೆಳಗ್ಗಿನ ಜಾವ 4 ಗಂಟೆಗೆ ಪೊಲೀಸ್ ಹಾಗೂ ಅರಣ್ಯ ಇಲಾಖೆ ಜಿಲ್ಲಾಡಳಿತದ ಆದೇಶದಂತೆ ಜೆಸಿಬಿ ಮೂಲಕ ಅಮಾನವೀಯವಾಗಿ ದಿಡ್ಡಳ್ಳಿಯ ಆದಿವಾಸಿಗಳ ಗುಡಿಸಲನ್ನು ತೆರವುಗೊಳಿಸಿದ್ದು, ಮಕ್ಕಳು ಹಾಗೂ ಮಹಿಳೆಯರು ಹಸಿವು ಮತ್ತು ನೋವುಗಳನ್ನು ಅನುಭವಿಸಿರುವುದು ಸರಕಾರಕ್ಕೆ ನಾಚಿಕೆ ತರುವ ವಿಚಾರವಾಗಿದೆ ಎಂದರು.
ಜಿಲ್ಲೆಯ ಕಾಫಿ ತೋಟಗಳಲ್ಲಿ ಜೀತದಾಳುಗಳಾಗಿದ್ದವರು ಹೊರ ಬಂದಿರುವುದನ್ನು ಸಹಿಸಲಾಗದ ಕೆಲವರು ಜಿಲ್ಲಾಡಳಿತದ ಮೂಲಕ ಸರಕಾರದ ಮೇಲೆ ಒತ್ತಡ ತಂದಿದ್ದಾರೆ. ನಮ್ಮ ಹೋರಾಟ ಬೆಂಗಳೂರು ತಲುಪುವಷ್ಟರಲ್ಲಿ ದಿಡ್ಡಳ್ಳಿಯಲ್ಲೇ ಭೂಮಿ ನೀಡಲು ಸರಕಾರ ಮುಂದಾಗಬೇಕು. ಜೀತ ಪದ್ಧತಿಯ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಎಲ್ಲರಿಗೂ ವಾಸಿಸಲು ಮನೆ ನೀಡಬೇಕು. ಒಂದು ಲಕ್ಷಕ್ಕೂ ಹೆಚ್ಚು ಲ್ಯಾಂಡ್ ಬ್ಯಾಂಕ್ ಭೂಮಿ ಇದ್ದರೂ ಸರಕಾರ ಯಾಕೆ ಬಡವರಿಗೆ ಭೂಮಿ ಹಂಚುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಶ್ರೀಮಂತರು ಮತ್ತು ಬಹು ರಾಷ್ಟ್ರೀಯ ಕಂಪನಿಗಳು ಕೇಳಿದರೆ ತಕ್ಷಣ ಭೂಮಿ ನೀಡುವ ಸರಕಾರಗಳು ಬಡವರಿಗೆ ಭೂಮಿ ನೀಡದೆ ಮೇಲ್ವರ್ಗದ ಪರವಾಗಿದೆ ಎಂದು ಆರೋಪಿಸಿದರು.
ಗುಜರಾತಿನಲ್ಲಿ ಶೇ 15 ರಷ್ಟು ಆದಿವಾಸಿಗಳಿದ್ದು, ಕರ್ನಾಟಕದಲ್ಲಿ ಭೂಮಿ ಹಕ್ಕು ನೀಡದಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಒಂದು ಮತವನ್ನೂ ನೀಡಬೇಡಿ ಎಂದು ಗುಜರಾತಿನ ಆದಿವಾಸಿಗಳಿಗೆ ತಿಳಿಸುವುದಾಗಿ ಎಚ್ಚರಿಸಿದರು. ದೇಶದಲ್ಲಿ ಮೋದಿಯ ಬಿಜೆಪಿ ಸರಕಾರ ಸಂವಿಧಾನವನ್ನು ಬುಡಮೇಲು ಮಾಡಿ, ಸಮಾಜವಾದಿ ದೇಶವನ್ನು ಹಾಳು ಮಾಡಿ ಒಂದು ಧರ್ಮದ ಆದಾರದಲ್ಲಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ನಮ್ಮ ಹೋರಾಟವನ್ನು ಮೋದಿ ಸರಕಾರಕ್ಕೂ ತಲುಪಬೇಕೆಂದ ಅವರು ರಾಜ್ಯ ಸರಕಾರ ಸ್ಪಂದಿಸದಿದ್ದರೆ ಹೋರಾಟವನ್ನು ದೆಹಲಿಗೆ ಕೊಂಡೊಯ್ಯಲಾಗುವುದು ಎಂದರು. ಸರಕಾರಗಳು ಬಡ ಜನತೆಯ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದ ಅವರು, ಎಲ್ಲಾ ಜನಪರ ಸಂಘಟನೆಗಳು ಜೊತೆ ಸೇರಿ ಪರ್ಯಾಯ ರಾಜಕೀಯವನ್ನು ಕಟ್ಟಿ ಬೆಳೆಸಬೇಕಾಗಿದೆ ಎಂದರು.
ನೂರಾರು ಆದಿವಾಸಿಗಳು ಘೋಷಣೆಗಳನ್ನು ಕೂಗುತ್ತಾ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿದರು.
ಈ ಸಂದರ್ಭ ಭೂಮಿ ಮತ್ತು ಹಕ್ಕು ವಂಚಿತರ ಹೋರಾಟ ಸಮಿತಿಯ ಸಿರಿಮನೆ ನಾಗರಾಜ್, ನಿರ್ವಾಣಪ್ಪ, ಪತ್ರಕರ್ತೆ ಗೌರಿ ಲಂಕೇಶ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್, ಪ್ರಮುಖರಾದ ಬಶೀರ್, ಕಂದೇಕಾಲ ಶ್ರೀನಿವಾಸ್, ಪೀಟರ್, ಹೇಮಂತ್, ಶೌಕತ್ ಅಲಿ, ನೇಮಿ ಚಂದ್, ರಫ್‌ಶೀರ್, ಮನ್ಸೂರ್, ಅಪ್ಪಾಜಿ, ಅಬ್ದುಲ್ ಅಡ್ಕಾರ್, ಸ್ವಾಮಿ, ಮುತ್ತಮ್ಮ ಸೇರಿದಂತೆ ಮತ್ತಿತರರು ಇದ್ದರು.







