ರೇಣುಕಾಚಾರ್ಯ ಕಾರಿನಲ್ಲಿ 2 ಲಕ್ಷಕ್ಕೂ ಅಧಿಕ ಮೊತ್ತ ಜಪ್ತಿ

ಗುಂಡ್ಲುಪೇಟೆ, ಎ. 7: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಪರಮಾಪ್ತ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪ್ರಯಾಣಿಸುತ್ತಿದ್ದ ಕಾರಿನಲ್ಲಿ 2.96ಲಕ್ಷ ರೂ.ನಗದು ಪತ್ತೆಯಾಗಿದ್ದು, ರೇಣುಕಾಚಾರ್ಯ ಕಾರನ್ನು ಸ್ಥಳದಲ್ಲೆ ಬಿಟ್ಟು ಪರಾರಿಯಾಗಿರುವ ಘಟನೆ ಗುಂಡ್ಲುಪೇಟೆ ಕ್ಷೇತ್ರದ ಹೀರೆಕಾಟಿಯಲ್ಲಿ ನಡೆದಿದೆ.
ಗುಂಡ್ಲುಪೇಟೆಯಿಂದ ಮೈಸೂರಿನ ನಂಜನಗೂಡು ಕ್ಷೇತ್ರದತ್ತ ರೇಣುಕಾಚಾರ್ಯ ತಮ್ಮ ಸ್ಕಾರ್ಪಿಯೋ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಇಲ್ಲಿನ ಬೈಗೂರು ಚೆಕ್‌ಪೋಸ್ಟ್ ಬಳಿ ಕಾಂಗ್ರೆಸ್ ಕಾರ್ಯಕರ್ತರು ತಡೆದಿದ್ದಾರೆ. ಹೀಗಾಗಿ ಆತಂಕಗೊಂಡ ರೇಣುಕಾಚಾರ್ಯ ಪರಾರಿಯಾಗಲು ಯತ್ನಿಸಿದ ಹಿನ್ನೆಲೆಯಲ್ಲಿ ಕೈ ಕಾರ್ಯಕರ್ತರು ಪೊಲೀಸರಿಗೆ ಸುದ್ಧಿ ಮುಟ್ಟಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ರೇಣುಕಾಚಾರ್ಯ ಅವರ ಕಾರನ್ನು ಬೆನ್ನಟ್ಟಿ ತಡೆದಿದ್ದಾರೆ. ಆದರೆ, ರೇಣುಕಾಚಾರ್ಯ ಹಣವಿದ್ದ ತನ್ನ ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ. ನಂಜನಗೂಡು ಕ್ಷೇತ್ರದ ಮತದಾರರಿಗೆ ಹಂಚಿಕೆ ಮಾಡಲು ಹಣವನ್ನು ಸಾಗಿಸುತ್ತಿದ್ದರು ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ರೇಣುಕಾಚಾರ್ಯ ಅವರ ಕಾರಿನಲ್ಲಿ ಪತ್ತೆಯಾದ 2.96 ಲಕ್ಷ ರೂ.ನಗದು ಹಾಗೂ ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು ಮತ್ತು ಚುನಾವಣಾ ಆಯೋಗದ ಅಧಿಕಾರಿಗಳು ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.







