ಮೂರು ವರ್ಷವಾದರೂ ಅಚ್ಛೇ ದಿನ್ ಬರಲಿಲ್ಲ ಏಕೆ ? : ಸಿಎಂ ಸಿದ್ದರಾಮಯ್ಯ
.jpeg)
ಗುಂಡ್ಲುಪೇಟೆ, ಎ.7: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮೂರು ವರ್ಷ ಕಳೆದರೂ ದೇಶದಲ್ಲಿ ಅಚ್ಛೇ ದಿನ್ ಬರಲಿಲ್ಲ ಏಕೆ ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್ ಅವರ ಪರವಾಗಿ ಗುಂಡ್ಲುಪೇಟೆಯಲ್ಲಿ ಇಂದು ಭರ್ಜರಿ ರೋಡ್ ಶೋ ನಡೆಸಿ ಭಾರಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಯವರು, ಕೇಂದ್ರ ಸರಕಾರದ ವಿರುದ್ಧ ಟೀಕಾ ಪ್ರಹಾರ ಮಾಡಿದರು.
ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮೋದಿಯವರು ಒಳ್ಳೆಯ ದಿನಗಳು ಬರಲಿವೆ. ಜನ ಸಾಮಾನ್ಯರು ಬದುಕು ಹಸನಾಗಲಿದೆ ಎಂದಿದ್ದರು. ಮೂರು ವರ್ಷಗಳಾದರೂ ಆ ಒಳ್ಳೆಯ ದಿನಗಳು ಇನ್ನೂ ಬಂದಿಲ್ಲ ಎಂದರು.
ಹಣ ಬಂದಿದೆಯೇ ?:
ವಿದೇಶದಲ್ಲಿರುವ ಕಪ್ಪು ಹಣ ತಂದು ನೂರು ದಿನದಲ್ಲಿ ಎಲ್ಲರ ಬ್ಯಾಂಕ್ ಖಾತೆಗಳಿಗೆ ತಲಾ 15 ಲಕ್ಷ ರೂ. ಜಮೆ ಮಾಡುವುದಾಗಿ ಮೋದಿಯವರು ಹೇಳಿದ್ದರು. ಯಾರ ಬ್ಯಾಂಕ್ ಖಾತೆಗಾದರೂ ಹಣ ಬಂದಿದೆಯೇ ? ಎಂದು ಸಿಎಂ ಪ್ರಶ್ನಿಸಿದಾಗ ನೆರೆದಿದ್ದವರು ಒಕ್ಕೊರಲಿನಿಂದ “ಇಲ್ಲ” ಎಂದು ಕೂಗಿದರು. ಬಿಜೆಪಿಯವರು ಎಂಥ ಸುಳ್ಳುಗಾರರು, ಮೋಸಗಾರರು ಎಂಬುದು ಇದರಿಂದಲೇ ಆರ್ಥವಾಗುತ್ತದೆ ಎಂದು ಮುಖ್ಯಮಂತ್ರಿಯವರು ಹೇಳಿದರು.
ನಾನು ಮುಖ್ಯಮಂತ್ರಿಯಾದ ಬಳಿಕ ಅಚ್ಛೇ ದಿನ್ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳುತ್ತಿದ್ದಾರೆ. ಅವರು ಮುಖ್ಯಮಂತ್ರಿ ಆಗುವುದಕ್ಕೂ ಅಚ್ಛೇ ದಿನ್ ಬರುವುದಕ್ಕೂ ಏನು ಸಂಬಂಧ ? ಎಂದು ಕೇಳಿದರು.
ಆದರೆ ನಮ್ಮ ಸರಕಾರ ಆ ರೀತಿ ಅಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗೆ ನೀಡಿದ್ದ ಭರವಸೆಗಳ ಪೈಕಿ ಶೇ. 90ರಷ್ಟು ಈಡೇರಿಸಿದ್ದೇವೆ. ಅಷ್ಟೇ ಅಲ್ಲ, ಐದು ಮಹತ್ವದ ಭರವಸೆಗಳನ್ನು ಅಧಿಕಾರ ಬಂದ ಅರ್ಧ ಗಂಟೆಯಲ್ಲಿ ಜಾರಿಗೆ ತಂದಿದ್ದೇವೆ. ನುಡಿದಂತೆ ನಡೆಯುವವರು ನಾವು. ಬಿಜೆಪಿಯವರಂತೆ ಸುಳ್ಳು ಹೇಳುವವರಲ್ಲ ಎಂದು ತಿಳಿಸಿದರು.
ಹಗರಣಗಳನ್ನು ಜನ ಮರೆತಿಲ್ಲ :
ಕಾಂಗ್ರೆಸ್ ಬಡವರ ಪರವಾದ ಪಕ್ಷ. ಆದರೆ ಬಿಜೆಪಿ ಬಂಡವಾಳಶಾಹಿಗಳ ಪರವಾಗಿರುವ ಪಕ್ಷ. ನನ್ನನ್ನು ಮುಖ್ಯಮಂತ್ರಿ ಮಾಡಿ. ಅದಕ್ಕಾಗಿ ಗುಂಡ್ಲುಪೇಟೆ, ನಂಜನಗೂಡು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಅವರು ಮಾಡಿರುವ ಹಗರಣಗಳನ್ನು ಜನ ಇನ್ನೂ ಮರೆತಿಲ್ಲ. ಮತ್ತೆ ಅವರಿಗೆ ಮತ ಹಾಕಬೇಕಂತೆ ಎಂದರು.
ಹಸಿರು ಶಾಲು ಹೊದ್ದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವಾಗ ನಾನು ರೈತರ ಪರ ನಾಯಕ ಎಂದಿದ್ದ ಯಡಿಯೂರಪ್ಪ ಅವರೇ, ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿಸಿ ಇಬ್ಬರನ್ನು ಕೊಂದವರು ಯಾರು? ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ಯಡಿಯೂರಪ್ಪ ಅವರೇ, ನಾನು ನಿಮ್ಮ ಹೋರಾಟ, ಹಾರಾಟ ಎಲ್ಲವನ್ನೂ ನೋಡಿದ್ದೇನೆ. ಸುಳ್ಳು ಹೇಳುವಂಥ ನಿಮ್ಮಂಥ ರಾಜಕಾರಣಿಯನ್ನು ನಾನು ಇದುವರೆಗೆ ನೋಡಿಯೇ ಇಲ್ಲ. ಅಧಿಕಾರದಲ್ಲಿ ಇದ್ದಾಗ ಒಂದು ಇಲ್ಲದಿದ್ದಾಗ ಮತ್ತೊಂದು ನಾಲಿಗೆ ನಿಮ್ಮದು. ರಾಜಕಾರಣದಲ್ಲಿ ಯಾವಾಗಲೂ ಒಂದೇ ನಾಲಿಗೆ ಇರಬೇಕು.
ಚಾಮರಾಜನಗರ ಜಿಲ್ಲೆಯಲ್ಲಿ ಕೆರೆಗಳನ್ನು ತುಂಬಿಸಲು ಮಂಜೂರಾತಿ ಕೊಡಿಸಿದವರು ದಿವಂಗತ ಮಹದೇವ ಪ್ರಸಾದ್ ಅವರು. ಬಿಜೆಪಿ ಸರ್ಕಾರ ಇದ್ದಾಗ ಒಂದೇ ಒಂದು ಕೆರೆ ತುಂಬಿಸಲಿಲ್ಲ. ಗುಂಡ್ಲುಪೇಟೆ ಕ್ಷೇತ್ರದ ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸದೇ ಹೋಗಿದ್ದರೆ ಪ್ರಸಾದ್ ಅವರು ಐದು ಬಾರಿ ಗೆಲ್ಲಲು ಸಾಧ್ಯವಿತ್ತೇ ?
ಮನುಷ್ಯತ್ವ ಇದೆಯೇ ?
ಹೆಣ್ಣು ಮಕ್ಕಳ ಚಾರಿತ್ರ್ಯವಧೆ ಮಾಡುವ, ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವ ಬಿಜೆಪಿಯವರಿಗೆ ಮನುಷ್ಯತ್ವ ಏನಾದರೂ ಇದೆಯೇ ? ಮಹಿಳೆಯರ ಬಗ್ಗೆ ಹೇಗೆ ಮಾತನಾಡಬೇಕು ಎಂಬ ಸಂಸ್ಕøತಿಯೇ ಅವರಿಗೆ ಇಲ್ಲ.
ನಮ್ಮ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್ ಅವರ ಬಗ್ಗೆ ಚುಚ್ಚಿ ಚುಚ್ಚಿ ಮಾತನಾಡುವ ಸಂಸದ ಪ್ರತಾಪ್ ಸಿಂಹ ಅಪ್ರಬುದ್ಧ. ಬಿಜೆಪಿಗೇ ಮತ ಹಾಕುವಂತೆ ದೇವರು ಮತ್ತು ತಾಳಿಯ ಮೇಲೆ ಆಣೆ ಮಾಡಿಸಿಕೊಳ್ಳುತ್ತಿರುವ ಬಿಜೆಪಿ ನಾಯಕರಿಗೆ ನಾಚಿಕೆ ಆಗುವುದಿಲ್ಲವೇ ? ಎಂದು ಮುಖ್ಯಮಂತ್ರಿಯವರು ಪ್ರಶ್ನಿಸಿದರು.
ಕೆಪಿಸಿಸಿ ಅಧ್ಯಕ್ಷರಾದ ಡಾ. ಈ. ಪರಮೇಶ್ವರ, ಸಚಿವರಾದ ಡಿ.ಕೆ. ಶಿವಕುಮಾರ್, ಯು.ಟಿ. ಖಾದರ್, ಎಂ.ಬಿ. ಪಾಟೀಲ್, ಮಾಜಿ ಸಚಿವರಾದ ಸಿ.ಎಂ. ಇಬ್ರಾಹಿಂ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಮದ್ದೂರು ಬಿಟ್ಟು ಚಾಮರಾಜಪೇಟೆಗೆ ಎಸ್.ಎಂ. ಕೃಷ್ಣ ಬಂದಿದ್ದು ಏಕೆ ?
ಇಂಥ ಸರಕಾರವನ್ನು ನಾನು ನೋಡಿಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಹೇಳಿದ್ದಾರೆ. ಮುಖ್ಯಮಂತ್ರಿಯಾಗಿ ಅವರು ನಂಬರ್ ಒನ್ ಸರ್ಕಾರವನ್ನು ಮುನ್ನಡೆಸಿದವರು. ಅವರಿಗೆ ದೂರದೃಷ್ಟಿ ಮತ್ತು ದೂರಾಲೋಚನೆ ಎಲ್ಲವೂ ಇತ್ತು. ಆದರೂ ಮದ್ದೂರು ವಿಧಾನಸಭೆ ಕ್ಷೇತ್ರ ಬಿಟ್ಟು ಬೆಂಗಳೂರಿನ ಚಾಮರಾಜಪೇಟೆಗೆ ಬಂದಿದ್ದು ಏಕೆ ? ಎಂದು ಮುಖ್ಯಮಂತ್ರಿಯವರು ಪ್ರಶ್ನಿಸಿದರು.
ಕೃಷ್ಣ ಅವರು ಒಮ್ಮೆ ಹಿಂತಿರುಗಿ ನೋಡಿಕೊಳ್ಳುವುದು ಒಳ್ಳೆಯದು. ಅದೇ ರೀತಿ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಮೈತ್ರಿ, ಮನಸ್ವಿನಿ, ಪಶುಭಾಗ್ಯ, ಕೃಷಿ ಭಾಗ್ಯದಂಥ ಯೋಜನೆಗಳನ್ನು ಜಾರಿಗೆ ತಂದಿದ್ದು ಯಾರು ಎಂಬುದನ್ನೂ ಅವರು ಗಮನಿಸುವುದು ಒಳಿತು ಎಂದು ಹೇಳಿದರು.







