ಪೊಲೀಸ್ ಸಿಬ್ಬಂದಿಗೆ ಹಲ್ಲೆ : ಕಮಿಷನರ್ ಪತ್ರಿಕಾ ಪ್ರಕಟಣೆಯಲ್ಲೇ ಗೊಂದಲ

ಮಂಗಳೂರು, ಎ.7: ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಶುಕ್ರವಾರ ಕರೆದ ಸುದ್ದಿಗೋಷ್ಠಿಯ ವೇಳೆ ವರದಿಗಾರರಿಗೆ ನೀಡಿದ ಪತ್ರಿಕಾ ಪ್ರಕಟನೆಯು ಗೊಂದಲ ಹಾಗೂ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಎ.4ರಂದು ಕೊಣಾಜೆ ಠಾಣಾ ವ್ಯಾಪ್ತಿಯ ಬೋಳಿಯಾರ್ ಎಂಬಲ್ಲಿ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿದ ಹಾಗೂ ಎ.5ರಂದು ಉರ್ವ ಎಎಸ್ಸೈ ಐತಪ್ಪರ ಕೊಲೆಯತ್ನ ಪ್ರಕರಣದಲ್ಲಿ ಬಂಧಿತರಾದ ಶಮೀರ್ ಮತ್ತು ಮುಹಮ್ಮದ್ ನಿಯಾಝ್ ಆರೋಪಿಗಳು ಎಂದು ಕಮಿಷನರ್ ನೀಡಿದ ಪತ್ರಿಕಾ ಪ್ರಕಟನೆಯಲ್ಲಿ ನಮೂದಿಸಲಾಗಿದೆ.
ಈ ಬಗ್ಗೆ ಪತ್ರಕರ್ತರು ಗಮನ ಸೆಳೆದಾಗ, 'ಇಲ್ಲ... ಇಲ್ಲ... ಇವರಿಬ್ಬರು ಉರ್ವ ಎಎಸ್ಸೈ ಮೇಲೆ ನಡೆದ ಕೊಲೆಯತ್ನ ಪ್ರಕರಣದ ಆರೋಪಿಗಳಷ್ಟೆ. ಕೊಣಾಜೆ ಠಾಣಾ ವ್ಯಾಪ್ತಿಯ ಬೋಳಿಯಾರ್‌ನಲ್ಲಿ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿದ ಪ್ರಕರಣದ ತನಿಖೆ ನಡೆಯುತ್ತಿದೆ' ಎಂದು ಕಮಿಷನರ್ ಚಂದ್ರಶೇಖರ್ ಹೇಳಿದರು.
ಹಾಗಿದ್ದರೆ, 'ತಾವು ನೀಡಿದ ಪತ್ರಿಕಾ ಪ್ರಕಟನೆಯಲ್ಲಿ ಎರಡೂ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರ ಮೇಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆಯಲ್ಲಾ...' ಎಂದು ಪತ್ರಕರ್ತರು ಹೇಳಿದಾಗ, ಸ್ವತ: ಕಮಿಷನರ್ ಗೊಂದಲಕ್ಕೀಡಾದರು.
ಕೊಣಾಜೆ ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ಆದರ್ಶ್ (23) ಮಂಗಳವಾರ ರಾತ್ರಿ ಬೋಳಿಯಾರ್‌ನಿಂದ ತನ್ನ ಬೈಕ್‌ನಲ್ಲಿ ತೆರಳುತ್ತಿದ್ದಾಗ ವ್ಯಕ್ತಿಯೊಬ್ಬ ರಸ್ತೆಬದಿಯ ಹೊಂಡಕ್ಕೆ ಬಿದ್ದಿದ್ದ. ಇದನ್ನು ಗಮನಿಸಿದ ಆದರ್ಶ್ ಆತನನ್ನು ಮೇಲಕ್ಕೆತ್ತಿದ್ದಲ್ಲದೆ ಬೈಕನ್ನೂ ಮೇಲಕ್ಕೆತ್ತಿ ಮಾನವೀಯತೆ ಮೆರೆದಿದ್ದರು. ಇದಕ್ಕೆ ಕೃತಜ್ಞತೆ ಸಲ್ಲಿಸಬೇಕಾಗಿದ್ದ ವ್ಯಕ್ತಿ ಪೊಲೀಸ್ ಕಾನ್‌ಸ್ಟೇಬಲ್ ಆದರ್ಶ್‌ರ ಕೆನ್ನೆಗೆ ಬಾರಿಸಿ ಹೊಂಡ ಸರಿಪಡಿಸಲು ನಿಮಗೆ ಸಂಕಟವೇ? ಎಂದು ಪ್ರಶ್ನಿಸಿ ಬೈಕ್‌ನಲ್ಲಿ ಪರಾರಿಯಾಗಿದ್ದ.
ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆವಾಗ ಬೈಕ್‌ನಲ್ಲಿ ಒಬ್ಬ ಮಾತ್ರ ಇದ್ದು, ಇದೀಗ ಪೊಲೀಸರು ನೀಡಿದ ಪ್ರಕಟನೆಯಲ್ಲಿ ಇಬ್ಬರು ಹೇಗೆ ಆರೋಪಿಗಳಾದರು ಎಂಬ ಪ್ರಶ್ನೆಗೆ ಪೊಲೀಸರೇ ಉತ್ತರಿಸಬೇಕಾಗಿದೆ.
ಅಂದಹಾಗೆ, ಈ ಗೊಂದಲಮಯ ಪತ್ರಿಕಾ ಪ್ರಕಟನೆಯನ್ನು ಸೃಷ್ಟಿಸಿದ್ದು ಯಾರು? ಯಾತಕ್ಕಾಗಿ ಸೃಷ್ಟಿಸಿದರು? ಶಮೀರ್ ಮತ್ತು ಮುಹಮ್ಮದ್ ನಿಯಾಝ್‌ರನ್ನು ಈ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನವೇ ಎಂಬ ಪ್ರಶ್ನೆ ಎದ್ದಿದೆ.







