ಮತಾಂತರ ವಿರೋಧ ಕಾಯ್ದೆ ಜಾರಿಗೆ ಮಹಾರಾಷ್ಟ್ರ ಸರಕಾರ ಚಿಂತನೆ

ಮುಂಬೈ, ಎ.7: ರಾಜ್ಯದಲ್ಲಿ ಸಂಚಾರೀ ಕ್ರೈಸ್ತಬೋಧಕರು ನಡೆಸುತ್ತಿದ್ದಾರೆ ಎನ್ನಲಾಗಿರುವ ಮತಾಂತರ ಪ್ರಕರಣವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಮತಾಂತರ ವಿರೋಧ ಕಾಯ್ದೆಯನ್ನು ಜಾರಿಗೆ ತರುವ ಬಗ್ಗೆ ಯೋಚಿಸಲಾಗುತ್ತಿದೆ . ಈ ವಿಷಯದ ಬಗ್ಗೆ ಶೀಘ್ರವೇ ಸಂವಾದ ಸಭೆಯೊಂದನ್ನು ಆಯೋಜಿಸಲಾಗುವುದು ಎಂದು ವಿಧಾನಸಭೆಯಲ್ಲಿ ಸರಕಾರ ಹೇಳಿಕೆ ನೀಡಿದೆ.
ರಾಜ್ಯದಲ್ಲಿ ಮತಾಂತರ ನಿಗ್ರಹಕ್ಕೆ ಸಂಬಂಧಿಸಿ ಯಾವುದೇ ಕಾನೂನು ಇಲ್ಲದ ಕಾರಣ ಇಂತಹ ಪ್ರಕರಣಗಳನ್ನು ಭಾರತೀಯ ದಂಡ ಸಂಹಿತೆ ಕಾಯ್ದೆಯಡಿ ದಾಖಲಿಸಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಕಳೆದ ವರ್ಷ ಅತ್ಯಲ್ಪಪ್ರಮಾಣದಲ್ಲಿ ಇಂತಹ ಪ್ರಕರಣ ದಾಖಲಾಗಿದೆ. ಆದ್ದರಿಂದ ಸಂವಾದ ಸಭೆಯ ಬಳಿಕ ಮತಾಂತರ ವಿರೋಧ ಕಾನೂನಿನ ಬಗ್ಗೆ ನಿರ್ಧರಿಸಲಾಗುವುದು ಎಂದು ಮಹಾರಾಷ್ಟ್ರದ ಸಹಾಯಕ ಗೃಹ ಸಚಿವ ದೀಪಕ್ ಕೇಸರ್ಕಾರ್ ವಿಧಾನಸಭೆಯಲ್ಲಿ ತಿಳಿಸಿದರು.
ರಾಜ್ಯದ ಅಮರಾವತಿ ಪ್ರದೇಶದಲ್ಲಿ ಕ್ರೈಸ್ತ ಭೋಧಕರು ಮತಾಂತರಗೊಳಿಸುವ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಬಡಜನರಿಗೆ ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿದೆ ಎಂದು ಬಿಜೆಪಿ ಶಾಸಕ ಅನಿಲ್ ಬೊಂಡೆ ಗಮನ ಸೆಳೆಯುವ ಗೊತ್ತುವಳಿ ಮೂಲಕ ವಿಷಯ ಪ್ರಸ್ತಾವಿಸಿದ್ದರು.





