ಗೋರಕ್ಷಕರಿಂದ ಹಲ್ಲೆ ಪ್ರಕರಣ: ಐಸಿಯುನಲ್ಲಿ ದಾಖಲಾಗಿದ್ದ ವ್ಯಕ್ತಿಯನ್ನು ಠಾಣೆಯಲ್ಲಿ ಕೂಡಿಹಾಕಿದ ಪೊಲೀಸರು : ಆರೋಪ

ಜೈಪುರ, ಎ.7: ಒಂದು ವಾರದ ಹಿಂದೆ ಅಝ್ಮತ್ ಖಾನ್ ತನ್ನ ಒಂದು ವರ್ಷದ ಮಗಳನ್ನು ಎತ್ತಿಕೊಂಡು ಆಕೆಯೊಡನೆ ಗಂಟೆಗಟ್ಟಲೆ ಆಟವಾಡುತ್ತಾ ಸಂಭ್ರಮದಲ್ಲಿದ್ದರು. ಆದರೆ ಇದೀಗ ಎದ್ದುನಿಲ್ಲಲೂ ಇವರಿಗೆ ಇನ್ನೊಬ್ಬರ ಸಹಾಯ ಹಸ್ತದ ಅಗತ್ಯವಿದೆ.
‘ಗೋರಕ್ಷಕ’ರಿಂದ ಅಮಾನುಷ ಥಳಿತಕ್ಕೊಳಗಾಗಿ ಬಳಿಕ ದಿನವಿಡೀ ಬೆಹ್ರೂರ್ ಪೊಲೀಸ್ ಠಾಣೆಯಲ್ಲಿ ಯಾವುದೇ ವೈದ್ಯಕೀಯ ಚಿಕಿತ್ಸೆಯಿಲ್ಲದೆ ದಿನವಿಡೀ ಕಳೆದ ಬಳಿಕ 22ರ ಹರೆಯದ ಅಝ್ಮತ್ ಖಾನ್‌ಗೆ ಈಗ ಎದ್ದುನಿಲ್ಲಲೂ ಸಾಧ್ಯವಾಗುತ್ತಿಲ್ಲ. ಮೇವಟ್‌ನಲ್ಲಿ ರುವ ತನ್ನ ಮನೆಯಲ್ಲಿ ಮಂಚದ ಮೇಲೆ ಮಲಗಿಕೊಂಡು ಅಸಹಾಯಕರಾಗಿ ಕುಟುಂಬ ವರ್ಗದವರ ಮುಖ ನೋಡುವುದು ಮತ್ತು ಆಗಿಂದಾಗ್ಗೆ ಮನೆಗೆ ಭೇಟಿ ನೀಡುತ್ತಿರುವ ಮಾಧ್ಯಮದ ಮಂದಿಯ ಪ್ರಶ್ನೆಗಳಿಗೆ ಉತ್ತರಿಸುವುದು ಇದು ಅವರ ದಿನಚರಿಯಾಗಿ ಬಿಟ್ಟಿದೆ.
ಗೋರಕ್ಷಕರ ಆಕ್ರಮಣದ ಬಳಿಕ ಪ್ರಜ್ಞಾಹೀನನಾಗಿ ಬಿದ್ದಿದ್ದ ನನ್ನ ಸೋದರನನ್ನು ಖಾಸಗಿ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕ(ಐಸಿಯು)ಕ್ಕೆ ದಾಖಲಿಸಲಾಯಿತು. ಎರಡು ದಿನಗಳ ಬಳಿಕ ಆತನನ್ನು ಇನ್ನಿಬ್ಬರ ಸಹಿತ ಪೊಲೀಸ್ ಠಾಣೆಗೆ ಕರೆತರಲಾಯಿತು. ಅಲ್ಲಿ ಅವರನ್ನು ದಿನವಿಡೀ ಇರಿಸಲಾಯಿತು. ಈ ವೇಳೆ ವೈದ್ಯಕೀಯ ಚಿಕಿತ್ಸೆ ನಿರಾಕರಿಸಲಾಗಿತ್ತು . ಇದರಿಂದ ಸೋದರನ ಆರೋಗ್ಯಸ್ಥಿತಿ ಹದಗೆಟ್ಟಿತು ಎಂದು ಅಝ್ಮತ್‌ಖಾನ್ ಸೋದರ ಯೂಸುಫ್ ತಿಳಿಸಿದ್ದಾರೆ.
ಠಾಣೆಯ ನೆಲದ ಮೇಲೆ ತನ್ನನ್ನು ಮಲಗಿಸಲಾಗಿತ್ತು. ತನ್ನನ್ನು ಆಸ್ಪತ್ರೆಯ ಐಸಿಯುವಿನಿಂದ ಠಾಣೆಗೆ ಕರೆತರಲು ಕಾರಣ ಏನು ಎಂಬ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ. ಅಲ್ಲದೆ ಆಸ್ಪತ್ರೆಗೆ ತೆರಳಲೂ ಬಿಡಲಿಲ್ಲ ಎಂದು ಅಝ್ಮತ್ ಖಾನ್ ತಿಳಿಸಿದ್ದಾರೆ.
ಎಪ್ರಿಲ್ 1ರಂದು ಜೈಪುರದ ಮಾರುಕಟ್ಟೆಯಲ್ಲಿ (ಹಾಲು) ಕರೆಯುವ ಹಸುವೊಂದನ್ನು ಖರೀದಿಸಿದ್ದ ಖಾನ್ ಮತ್ತು ಇನ್ನಿತರರು ತಮ್ಮ ಗ್ರಾಮಕ್ಕೆ ಹಿಂದಿರುಗುತ್ತಿದ್ದಾಗ ಗೋರಕ್ಷಕರಿಂದ ಹಲ್ಲೆಗೆ ಒಳಗಾಗಿದ್ದರು. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಪೆಹ್ಲೂ ಖಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.
ಪೆಹ್ಲೂಖಾನ್ ಮೃತಪಟ್ಟ ಬಳಿಕ ಠಾಣೆಗೆ ಹೋಗಿ ನನ್ನ ಸೋದರ ಹಾಗೂ ಇತರ ಮೂವರನ್ನು ಬಿಡುಗಡೆಗೊಳಿಸುವಂತೆ ಪೊಲೀಸರನ್ನು ಬೇಡಿಕೊಂಡೆವು. ಅಝ್ಮತ್ ದೇಹಸ್ಥಿತಿ ಎಷ್ಟೊಂದು ಬಿಗಡಾಯಿಸಿತ್ತು ಎಂದರೆ ಅವರನ್ನು ತಕ್ಷಣ ಇನ್ನೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಬೇಕಾಯಿತು ಎಂದು ಯೂಸುಫ್ ತಿಳಿಸಿದ್ದಾರೆ.
ಮೇವಾಟ್‌ನಲ್ಲಿ ನೂರಾರು ವರ್ಷಗಳಿಂದ ಹಿಂದೂ ಮತ್ತು ಮುಸ್ಲಿಮರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಈ ಘಟನೆಯನ್ನು ನಂಬಲಾಗುತ್ತಿಲ್ಲ. ಇನ್ನೂ 22ರ ಹರೆಯದಲ್ಲಿರುವ ಅಝ್ಮತ್ ಹಾಸಿಗೆ ಹಿಡಿದಿರುವುದು ಆಘಾತಕಾರಿಯಾಗಿದೆ ಎಂದು ನೆರೆಮನೆಯ ಮಂಗಲ್ ರಾಮ್ ಹೇಳಿದ್ದಾರೆ.
ಗೋರಕ್ಷಕರು ಅಮಾಯಕರ ಮೇಲೆ ಹಲ್ಲೆ ನಡೆಸಿ ಓರ್ವನನ್ನು ಹತ್ಯೆ ಮಾಡಿದ್ದಾರೆ. ಅವರನ್ನು ಬಂಧಿಸುವ ಬದಲು ಪೊಲೀಸರು ಗಾಯಗೊಂಡು ಐಸಿಯು ಘಟಕದಲ್ಲಿ ದಾಖಲಾಗಿದ್ದ ವ್ಯಕ್ತಿಯನ್ನು ದಿನವಿಡೀ ಚಿಕಿತ್ಸೆಯ ವ್ಯವಸ್ಥೆ ಮಾಡದೆ ಠಾಣೆಯಲ್ಲಿರಿಸಿದ್ದಾರೆ. ಇದು ಯಾವ ರೀತಿಯ ಕಾನೂನಿನ ಪರಿಪಾಲನೆ ಎಂದು ಅಝ್ಮತ್ ಕುಟುಂಬದ ನಿಕಟ ಸ್ನೇಹಿತ ಹಾಜಿ ಮುಹಮ್ಮದಿನ್ ಪ್ರಶ್ನಿಸುತ್ತಾರೆ.
ಆದರೆ ಈ ಆರೋಪ ನಿರಾಕರಿಸಿರುವ ಬೆಹ್ರೂರ್ ಡಿಎಸ್‌ಪಿ ಪರ್ಮಾಲ್ ಸಿಂಗ್, ಇದು ಸುಳ್ಳು ಆರೋಪ. ಐಸಿಯುವಿನಲ್ಲಿ ದಾಖಲಾಗಿರುವವರನ್ನು ನಾವೇಕೆ ಠಾಣೆಗೆ ಕರೆದೊಯ್ಯಬೇಕು ಎಂದಿದ್ದಾರೆ.







