ಉ.ಪ್ರದೇಶ: ಶಾಲಾ ವ್ಯಾಸಂಗಕ್ರಮದಲ್ಲಿ ಯೋಗದ ಪಾಠ

ಲಕ್ನೊ, ಎ.7: ಹೊಸ ಶೈಕ್ಷಣಿಕ ವರ್ಷದಿಂದ ಉತ್ತರಪ್ರದೇಶದಲ್ಲಿ ಯೋಗವನ್ನು 5ರಿಂದ 12ನೇ ತರಗತಿವರೆಗೆ ಒಂದು ಪಠ್ಯವಾಗಿ ವ್ಯಾಸಂಗಕ್ರಮದಲ್ಲಿ ಸೇರಿಸಲಾಗಿದೆ.
ಯೋಗವನ್ನು ಶಾಲಾ ವ್ಯಾಸಂಗಕ್ರಮದ ದೈಹಿಕ ಶಿಕ್ಷಣ ಪಾಠದಲ್ಲಿ ಸೇರಿಸಲಾಗುವುದು ಎಂದು ಲಕ್ನೊದ ಇಂದಿರಾಗಾಂಧಿ ಪ್ರತಿಷ್ಠಾನದಲ್ಲಿ ಮಾ.29ರಂದು ನಡೆದಿದ್ದ ಯೋಗ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ದಿನೇಶ್ ಶರ್ಮ ಭರವಸೆ ನೀಡಿದ್ದರು.ಶರ್ಮ ಮಾಧ್ಯಮಿಕ ಶಿಕ್ಷಣ ಇಲಾಖೆಯ ಸಚಿವರೂ ಆಗಿದ್ದಾರೆ.
ಇಂದಿನಿಂದ ರಾಜ್ಯದ ಶಾಲೆಗಳಲ್ಲಿ ಯೋಗವು ದೈಹಿಕ ಶಿಕ್ಷಣ ಪಾಠದ ಒಂದು ಪಠ್ಯಕ್ರಮವಾಗಿರುತ್ತದೆ. ಆದರೆ ಇಲ್ಲಿ ಯಾರನ್ನೂ ಸೂರ್ಯ ನಮಸ್ಕಾರ ಸೇರಿದಂತೆ ಯಾವುದೇ ಯೋಗಾಸನ ಮಾಡಲು ಬಲವಂತಪಡಿಸುತ್ತಿಲ್ಲ. ಯೋಗ ತರಗತಿಗೆ ಸೇರಲು ಬಯಸುವವರಿಗೆ ಸ್ವಾಗತವಿರುತ್ತದೆ ಎಂದು ಶರ್ಮ ಮಾಧ್ಯಮದವರಿಗೆ ತಿಳಿಸಿದರು.
ಯೋಗಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯೋಗಕ್ಕೆ ಕೋಮುವಾರು ಹಣೆಪಟ್ಟಿ ಸಲ್ಲದು. ಯೋಗವು ಜೀವನದ ಒಂದು ಭಾಗವಾಗಿದ್ದು ವಿದ್ಯಾರ್ಥಿಗಳನ್ನು ಆರೋಗ್ಯವಂತರಾಗಿಸಿ ದೈನಂದಿನ ಒತ್ತಡ ನಿಭಾಯಿಸಲು ಸಹಾಯವಾಗುತ್ತದೆ. ಮುಸ್ಲಿಂ ರಾಷ್ಟ್ರಗಳಲ್ಲೂ ಜೂನ್ 21ನ್ನು ವಿಶ್ವ ಯೋಗ ದಿನವೆಂದು ಆಚರಿಸಲಾಗುತ್ತಿದೆ. ಪಠ್ಯಕ್ರಮದಲ್ಲಿ ಯೋಗದ ಸೇರ್ಪಡೆ ಶಿಕ್ಷಣದ ಗುಣಮಟ್ಟ ಸುಧಾರಿಸಲು ನಾವು ನಡೆಸುತ್ತಿರುವ ಪ್ರಯತ್ನದ ಅಂಗವಾಗಿದೆ ಎಂದರು. ಶೀಘ್ರವೇ ಸಂಸ್ಕೃತ ಮಂಡಳಿಯನ್ನು ರಚಿಸಲಾಗುವುದು ಎಂದವರು ಹೇಳಿದರು.
ಸಂಸ್ಕೃತ ಮಾಧ್ಯಮಿಕ ಶಿಕ್ಷಣ ಮಂಡಳಿಗೆ ತಜ್ಞರ ಸಮಿತಿಯೊಂದನ್ನು ರಚಿಸುವ ಪ್ರಕ್ರಿಯೆ ಸಾಗುತ್ತಿದೆ. ವಿದ್ಯಾರ್ಥಿಗಳ ಸೇರ್ಪಡೆ, ಪರೀಕ್ಷೆ ನಡೆಸುವುದು, ವ್ಯಾಸಂಗಕ್ರಮದ ಅನುಸಾರ ಲಭ್ಯ ಅನುದಾನವನ್ನು ಶಾಲೆಗಳಿಗೆ ಒದಗಿಸುವುದು ಮುಂತಾದ ಕಾರ್ಯವನ್ನು ಈ ಸಮಿತಿ ನಿರ್ವಹಿಸಲಿದ್ದು ರಾಷ್ಟ್ರದಲ್ಲೇ ಪ್ರಪ್ರಥಮ ಬಾರಿಗೆ ಈ ರೀತಿಯ ಸಮಿತಿ ರಚಿಸಲಾಗಿದೆ . ರಾಜ್ಯದಲ್ಲಿ ಈಗಾಗಲೇ ಸಂಸ್ಕೃತ ಮಂಡಳಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಸಿಬ್ಬಂದಿಗಳ ಕೊರತೆಯ ಕಾರಣ ಇದು ಬಹುತೇಕ ನಿಷ್ಕ್ರಿಯವಾಗಿದೆ. ಆದರೆ ಇದೀಗ ಕೆಲವು ಪ್ರಸಿದ್ಧ ಸಂಸ್ಕೃತ ವಿದ್ವಾಂಸರು, ಬುದ್ಧಿಜೀವಿಗಳು, ಪ್ರೊಫೆಸರ್‌ಗಳು, ಲೇಖಕರನ್ನು ಸಮಿತಿಗೆ ಸೇರಿಸಿಕೊಳ್ಳುವ ಮೂಲಕ ಮಂಡಳಿಯನ್ನು ಉನ್ನತೀಕರಿಸಲಾಗುವುದು ಎಂದವರು ತಿಳಿಸಿದರು.







