ಬಿಜೆಪಿ ಮುಖಂಡನ ಮನೆಯಿಂದ ಮಾದಕ ದ್ರವ್ಯ ಸಹಿತ ಮೂವರ ಸೆರೆ

ಗುರುದಾಸ್‌ಪುರ, ಎ.7: ಜಿಲ್ಲೆಯ ಶಹಾಬಾದ್ ಗ್ರಾಮದ ಬಿಜೆಪಿ ನಾಯಕ ಹಾಗೂ ಗ್ರಾಮಪಂಚಾಯತ್ ಅಧ್ಯಕ್ಷರ ನಿವಾಸದಿಂದ ಮಾದಕ ದೃವ್ಯ ಮಾರಾಟಗಾರರು ಎನ್ನಲಾದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಶಹಾಬಾದ್ ಪ್ರದೇಶದ ಬಿಜೆಪಿ ಮಂಡಲಪ್ರಧಾನ , ಸ್ಥಳೀಯ ಪಂಚಾಯತ್ ಅಧ್ಯಕ್ಷ ಹರೀಂದರ್ ಸಿಂಗ್ ನಿವಾಸದ ಮೇಲೆ ದಾಳಿ ನಡೆಸಿದ ಪೊಲೀಸರು ಹರೀಂದರ್ ಪುತ್ರ ಹಸನ್‌ದೀಪ್ ಸಿಂಗ್ ಮತ್ತು ಆತನ ಇಬ್ಬರು ಸಹಚರರಾದ ಗುರುಚರಣ್ ಸಿಂಗ್ ಹಾಗೂ ಹರ್ಮನ್‌ದೀಪ್ ಸಿಂಗ್‌ರನ್ನು ಬಂಧಿಸಿದ್ದಾರೆ. ಬಂಧಿತರ ಬಳಿಯಿದ್ದ 87 ಗ್ರಾಂ ಹೆರಾಯ್ನಾ, ಒಂದು ಜರ್ಮನ್ ನಿರ್ಮಿತ 12 ಬೋರ್ ಪಿಸ್ತೂಲು, ಒಂದು 12 ಬೋರ್ ರೈಫಲ್ , ಐದು ಮದ್ದುಗುಂಡು ಮತ್ತು ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಹರೀಂದರ್ ಸಿಂಗ್ ಮತ್ತು ಆತನ ಪುತ್ರ ಹಸನ್‌ದೀಪ್ ಸಿಂಗ್ ಇಬ್ಬರ ವಿರುದ್ಧವೂ ಈಗಾಗಲೇ ಮತ್ತೊಂದು ಪ್ರಕರಣದಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ. ಅಲ್ಲದೆ ಹರ್ಮನ್‌ದೀಪ್ ವಿರುದ್ಧ ಕೂಡಾ ಕೊಲೆ ಪ್ರಕರಣ ಮತ್ತು ಗುರುಚರಣ್ ಸಿಂಗ್ ವಿರುದ್ಧ ಅಪಹರಣ ಪ್ರಕರಣ ಈ ಹಿಂದೆಯೇ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.