ಸಮಾದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಜವಾಬ್ದಾರಿ ವಕೀಲರದ್ದು: ಪ್ರೊ.ಪಾಟೀಲ್
ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

ಉಡುಪಿ, ಎ.7: ಸಮಾಜದಲ್ಲಿ ಯಾವುದೇ ಸಮಸ್ಯೆ ಬಂದರೂ ಪರಿಹಾರ ಕ್ಕಾಗಿ ವಕೀಲರೇ ಬೇಕು. ಇಬ್ಬರು ಕಕ್ಷಿದಾರರ ನಡುವಿನ ವಿವಾದ ಬಗೆಹರಿಸಿ ಇಡೀ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಬಹಳ ದೊಡ್ಡ ಜವಾಬ್ದಾರಿ ವಕೀಲರ ಮೇಲೆ ಇದೆ. ಆದುದರಿಂದ ವಕೀಲ ವೃತ್ತಿಯ ವೌಲ್ಯವನ್ನು ಅರಿತುಕೊಳ್ಳಬೇಕಾಗಿದೆ ಎಂದು ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಸ್.ಪಾಟೀಲ್ ಹೇಳಿದ್ದಾರೆ.
ಉಡುಪಿ ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ನ್ಯಾಯವಾದಿ ಶಿವಾಜಿ ಶೆಟ್ಟಿ ಸ್ಮಾರಕ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆ ಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಕೀಲ ವೃತ್ತಿಗೆ ವಿಶಿಷ್ಟವಾದ ಸ್ಥಾನಮಾನ ಇದೆ. ಜನರು ಸತ್ಯ ನ್ಯಾಯಕ್ಕಾಗಿ ವಕೀಲರ ಬಳಿ ಬರುತ್ತಾರೆ. ವಿವಾದಗಳನ್ನು ಬಗೆಹರಿಸುವ ದೊಡ್ಡ ಜವಾಬ್ದಾರಿ ವಕೀಲರ ಮೇಲಿದೆ. ವೃತ್ತಿಯ ಮೌಲ್ಯಗಳನ್ನು ಪಾಲಿಸಬೇಕು ಮತ್ತು ಮಾನ ವೀಯ ಸ್ಪಂದನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಅಣಕು ನ್ಯಾಯಾಲಯ ಸ್ಪರ್ಧೆ ಗಂಭೀರವಾದ ಶೈಕ್ಷಣಿಕ ಚಟುವಟಿಕೆಯಾ ಗಿದ್ದು, ಕಾನೂನು ವಿದ್ಯಾರ್ಥಿಗಳು ಅಣಕು ನ್ಯಾಯಾಲಯ ಸ್ಪರ್ಧೆಗಳಲ್ಲಿ ಭಾಗ ವಹಿಸುವ ಮೂಲಕ ತಮ್ಮದೇ ಶೈಲಿಯನ್ನು ರೂಪಿಸಿಕೊಳ್ಳಬಹುದು. ವಿಶ್ಲೇಷ ಣಾತ್ಮಕ ಕೌಶಲ್ಯ ಹಾಗೂ ಸಂಶೋಧನಾ ಪ್ರವೃತ್ತಿ ಮೂಲಕ ಕಾನೂನನ್ನು ಕಲಿಯಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಮಣಿಪಾಲ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ವಹಿಸಿದ್ದರು. ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಪ್ರಕಾಶ್ ಕಣಿವೆ ಸ್ವಾಗತಿಸಿದರು. ವೇದಿಕೆಯಲ್ಲಿ ಜಯಂತಿ ಪಿ. ಶಿವಾಜಿ ಶೆಟ್ಟಿ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ರೋಹಿತ್ ಅಮೀನ್, ಉಪನ್ಯಾಸಕಿ ಡಾ. ನಿರ್ಮಲಾ ಕುಮಾರಿ, ವಿದ್ಯಾರ್ಥಿನಿ ನಿವೇದಿತಾ ಬಾಳಿಗಾ ಉಪಸ್ಥಿತರಿದ್ದರು.







