ನಜೀಬ್ ಕುರಿತು ಸುಳ್ಳು ವರದಿ:ಟೈಮ್ಸ್ ಆಫ್ ಇಂಡಿಯಾ, ಟೈಮ್ಸ್ ನೌ ಇತ್ಯಾದಿಗಳಿಗೆ ತಾಯಿಯಿಂದ ಕಾನೂನು ನೋಟಿಸ್

ಹೊಸದಿಲ್ಲಿ,ಎ.7: ತನ್ನ ಮಗ ಐಸಿಸ್ ನಂಟನ್ನು ಹೊಂದಿದ್ದಾನೆ ಅಥವಾ ಐಸಿಸ್ ಸೇರಲು ಮಾರ್ಗಗಳನ್ನು ಹುಡುಕುತ್ತಿದ್ದಾನೆ ಎಂದು ಸುಳ್ಳು ವರದಿಗಳನ್ನು ಪ್ರಕಟಿಸಿದ್ದಕ್ಕಾಗಿ ನಾಪತ್ತೆಯಾಗಿರುವ ಜೆಎನ್‌ಯು ವಿದ್ಯಾರ್ಥಿ ನಜೀಬ್ ಅಹ್ಮದ್ ಅವರ ತಾಯಿ ಫಾತಿಮಾ ನಫೀಸ್ ಅವರು ಟೈಮ್ಸ್ ಆಫ್ ಇಂಡಿಯಾ ಹಾಗೂ ಟೈಮ್ಸ್ ನೌ, ಝೀ ನ್ಯೂಸ್ ಸೇರಿದಂತೆ ಪ್ರಮುಖ ವಿದ್ಯುನ್ಮಾನ ಸುದ್ದಿ ಮಾಧ್ಯಮಗಳಿಗೆ ಕಾನೂನು ನೋಟಿಸ್‌ಗಳನ್ನು ಕಳುಹಿಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ 2017,ಮಾ.21ರ ತನ್ನ ರಾಷ್ಟ್ರೀಯ ಆವೃತ್ತಿಯ ಮುಖಪುಟದಲ್ಲಿ ನಜೀಬ್ ಅಹ್ಮದ್‌ರ ಗೂಗಲ್ ಮತ್ತು ಯು ಟ್ಯೂಬ್ ಶೋಧಗಳಿಗೆ ಸಂಬಂಧಿಸಿದಂತೆ ಮಾನಹಾನಿಕರ ಹೇಳಿಕೆಗಳನ್ನೊಳಗೊಂಡ ಆಧಾರರಹಿತ ವರದಿಯನ್ನು ಪ್ರಕಟಿಸಿತ್ತು ಮತ್ತು ಅದೇ ದಿನ ದಿಲ್ಲಿ ಪೊಲೀಸರು ಈ ಎಲ್ಲ ಹೇಳಿಕೆಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದರು.
ಮರುದಿನ ದಿಲ್ಲಿಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿದ್ದ ಫಾತಿಮಾ ಬೇಷರತ್ ಕ್ಷಮೆ ಯಾಚಿಸುವಂತೆ ಈ ಸುಳ್ಳು ಸುದ್ದಿಯನ್ನು ಮರುವರದಿ ಮಾಡಿದ್ದ ಮಾಧ್ಯಮಗಳಿಗೆ ಸೂಚಿಸಿದ್ದರು. ದುರುದ್ದೇಶಪೂರಿತ ವರದಿಯನ್ನು ಪ್ರಕಟಿಸುವ ಮೂಲಕ ತನ್ನ ಕುಟುಂಬದ ಪ್ರತಿಷ್ಠೆಗೆ ಹಾನಿಯನ್ನುಂಟು ಮಾಡಿದ್ದಕ್ಕೆ ಟೈಮ್ಸ್ ಆಫ್ ಇಂಡಿಯಾವನ್ನು ಅವರು ತೀವ್ರ ತರಾಟೆಗೆತ್ತಿಕೊಂಡಿದ್ದರು.
ಕ್ಷಮೆ ಯಾಚಿಸುವಂತೆ ಫಾತಿಮಾರ ಸೂಚನೆಗೆ ಟೈಮ್ಸ್ ಆಫ್ ಇಂಡಿಯಾ ಪ್ರತಿಕ್ರಿಯಿಸಿರಲಿಲ್ಲ. ನಜೀಬ್ ಕುರಿತ ವರದಿಯಲ್ಲಿ ಯಾವುದೇ ಸತ್ಯಾಂಶಗಳಿಲ್ಲವೆಂದು ಸ್ಪಷ್ಟಪಡಿಸಿ ದಿಲ್ಲಿ ಪೊಲೀಸ್‌ನ ಡಿಸಿಪಿಯವರು ಮಾ.22ರಂದೇ ಬರೆದಿದ್ದ ಪತ್ರವನ್ನು ಟೈಮ್ಸ್ ಆಫ್ ಇಂಡಿಯಾ ತನ್ನ ದಿಲ್ಲಿ ಆವೃತ್ತಿಯ ಐದನೇ ಪುಟದಲ್ಲಿ ಸಣ್ಣದಾಗಿ ಪ್ರಕಟಿಸಿ ಕೈತೊಳೆದುಕೊಂಡಿತ್ತು.
ಆದರೆ ಅದು ತನ್ನ ಕೃತ್ಯಕ್ಕಾಗಿ ಫಾತಿಮಾರ ಕ್ಷಮೆಯನ್ನೂ ಕೋರಿರಲಿಲ್ಲ, ಸುಳ್ಳು ಸುದ್ದಿಯನ್ನು ಸಿದ್ಧಪಡಿಸಿದ್ದಕ್ಕಾಗಿ ತನ್ನ ವರದಿಗಾರನ ವಿರುದ್ಧ ಯಾವುದೇ ಕ್ರಮವನ್ನೂ ಕೈಗೊಂಡಿರಲಿಲ್ಲ. ಈ ಸುಳ್ಳು ವರದಿ ಈಗಲೂ ಟೈಮ್ಸ್‌ನ ವೆಬ್‌ಸೈಟ್‌ನಲ್ಲಿದೆ ಮತ್ತು ಬಿಜೆಪಿ ಹಾಗೂ ಆರೆಸ್ಸೆಸ್ ನಾಯಕರು ಸಾಮಾಜಿಕ ಮಾಧ್ಯಮಗಳಲ್ಲಿ ಅದನ್ನು ವ್ಯಾಪಕವಾಗಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಮುಖಪುಟದಲ್ಲಿ ಕ್ಷಮೆ ಯಾಚಿಸುವಂತೆ ಟೈಮ್ಸ್‌ಗೆ ಸೂಚಿಸಿ ಬರೆಯಲಾದ ಅಹವಾಲಿಗೆ 7,500 ಕ್ಕೂ ಅಧಿಕ ಜನರು ಸಹಿಗಳನ್ನು ಹಾಕಿದ್ದಾರೆ.
ಇದೀಗ ತನ್ನ ನ್ಯಾಯವಾದಿ ವೃಂದಾ ಗ್ರೋವರ್ ಮೂಲಕ ಕಾನೂನು ನೋಟಿಸ್ ರವಾನಿಸಿರುವ ಫಾತಿಮಾ ತನ್ನ ಮುಖಪುಟದಲ್ಲಿ ಸತತ ಏಳು ದಿನಗಳ ಕಾಲ ಕ್ಷಮೆಯಾಚನೆಯನ್ನು ಪ್ರಕಟಿಸುವಂತೆ ಟೈಮ್ಸ್ ಆಫ್ ಇಂಡಿಯಾಕ್ಕೆ ತಾಕೀತು ಮಾಡಿದ್ದಾರೆ. ಅಲ್ಲದೆ ತಮ್ಮ ಚಾನೆಲ್‌ಗಳಲ್ಲಿ ಒಂದು ವಾರ ಕ್ಷಮೆ ಯಾಚಿಸುವಂತೆ ಟೈಮ್ಸ್ ನೌ, ಝೀ ನ್ಯೂಸ್ ಮತ್ತು ದಿಲ್ಲಿ ಆಜ್‌ತಕ್ ವಾಹಿನಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಸುಳ್ಳು ಸುದ್ದಿಯನ್ನು ಪ್ರಕಟಿಸಿದ್ದಾಗಿ ಒಪ್ಪಿಕೊಂಡು ಕ್ಷಮೆ ಯಾಚನೆಯನ್ನು ಏಳು ದಿನಗಳ ಕಾಲ ಪ್ರತಿ ಎರಡು ಗಂಟೆಗೊಮ್ಮೆ ಟ್ವೀಟಿಸುವಂತೆಯೂ ಅವರು ತಿಳಿಸಿದ್ದಾರೆ.
ಇದಕ್ಕೆ ತಪ್ಪಿದಲ್ಲಿ ಕ್ರಿಮಿನಲ್ ಕ್ರಮಗಳನ್ನು ಜರುಗಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹಿತ್ ಪಾಂಡೆ ಅವರು ಫಾತಿಮಾರ ಕ್ರಮಗಳಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.







