ಗುಜರಾತ್ ವಿರುದ್ಧ ಕೆಕೆಆರ್ ವಿಶ್ವದಾಖಲೆಯ ಚೇಸಿಂಗ್
ಲಿನ್, ಗಂಭೀರ್ ಭರ್ಜರಿ ಬ್ಯಾಟಿಂಗ್, 10 ವಿಕೆಟ್ ಗೆಲುವು

ರಾಜ್‌ಕೋಟ್, ಎ.7: ಆರಂಭಿಕ ಆಟಗಾರರಾದ ಕ್ರಿಸ್ ಲಿನ್ ಹಾಗೂ ಗೌತಮ್ ಗಂಭೀರ್ ಅವರ ಭರ್ಜರಿ ಬ್ಯಾಟಿಂಗ್ ಬೆಂಬಲದಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ ಆತಿಥೇಯ ಗುಜರಾತ್ ಲಯನ್ಸ್ ವಿರುದ್ಧ 10 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿದೆ. ಈ ಮೂಲಕ ಟ್ವೆಂಟಿ-20 ಇತಿಹಾಸದಲ್ಲಿ ಮೊದಲ ಬಾರಿ ವಿಕೆಟ್ ನಷ್ಟವಿಲ್ಲದೆ 184 ರನ್ ಗುರಿ ತಲುಪಿದ ಸಾಧನೆ ಮಾಡಿದೆ.
ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಐಪಿಎಲ್‌ನ 3ನೆ ಪಂದ್ಯದಲ್ಲಿ ಗೆಲುವಿಗೆ ಕಠಿಣ ರನ್ ಗುರಿ ಪಡೆದಿದ್ದ ಕೆಕೆಆರ್ ತಂಡ ಆಸ್ಟ್ರೇಲಿಯದ ಬಲಗೈ ಬ್ಯಾಟ್ಸ್‌ಮನ್ ಲಿನ್(ಅಜೇಯ 93, 41 ಎಸೆತ, 6 ಬೌಂಡರಿ, 8 ಸಿಕ್ಸರ್) ಹಾಗೂ ಎಡಗೈ ದಾಂಡಿಗ ಗಂಭೀರ್(ಅಜೇಯ 76 ರನ್, 48ಎಸೆತ, 12ಬೌಂಡರಿ)ಮೊದಲ ವಿಕೆಟ್ ಜೊತೆಯಾಟದಲ್ಲಿ ಸೇರಿಸಿದ 184 ರನ್ ನೆರವಿನಿಂದ ಇನ್ನೂ 31 ಎಸೆತಗಳು ಬಾಕಿ ಇರುವಾಗಲೇ ಜಯಭೇರಿ ಬಾರಿಸಿತು. 10ನೆ ಆವೃತ್ತಿಯ ಐಪಿಎಲ್‌ನಲ್ಲಿ ಗೆಲುವಿನ ಆರಂಭ ಪಡೆಯಿತು.
ಗಂಭೀರ್‌ರೊಂದಿಗೆ ಇನಿಂಗ್ಸ್ ಆರಂಭಿಸಿದ ಲಿನ್ ಕೇವಲ 19 ಎಸೆತಗಳಲ್ಲಿ ಐಪಿಎಲ್‌ನಲ್ಲಿ 2ನೆ ವೇಗದ ಅರ್ಧಶತಕ ಬಾರಿಸಿದರು. 226.82ರ ಸ್ಟೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ ಲಿನ್ ಗುಜರಾತ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಲಿನ್‌ಗೆ ಉತ್ತಮ ಸಾಥ್ ನೀಡಿದ ಗಂಭೀರ್ ಕೋಲ್ಕತಾ ತಂಡ 14.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗೆಲುವಿನ ದಡ ಸೇರಲು ನೆರವಾದರು.
ಗುಜರಾತ್ ಬೌಲರ್ ಡರೆನ್ ಸ್ಮಿತ್ ಒಂದೇ ಓವರ್‌ನಲ್ಲಿ 23 ರನ್ ನೀಡಿ ಕೈಸುಟ್ಟುಕೊಂಡರು. ಗೋನಿ ಎರಡೇ ಓವರ್‌ನಲ್ಲಿ 32 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು. ಗುಜರಾತ್‌ನ ಪರ ಆರು ಬೌಲರ್‌ಗಳು ದಾಳಿಗೆ ಇಳಿದರೂ ಗಂಭೀರ್-ಲಿನ್ ಜೋಡಿಯನ್ನು ಬೇರ್ಪಡಿಸಲು ಸಾಧ್ಯವಾಗಲಿಲ್ಲ.
ಗುಜರಾತ್ 183/4: ಇದಕ್ಕೂ ಮೊದಲು ಕೆಕೆಆರ್ ತಂಡದಿಂದ ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಗುಜರಾತ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 183 ರನ್ ಗಳಿಸಿತು.
ನಾಯಕ ಸುರೇಶ್ ರೈನಾ ಹಾಗೂ ದಿನೇಶ್ ಕಾರ್ತಿಕ್ ಭರ್ಜರಿ ಜೊತೆಯಾಟದ ನೆರವಿನಿಂದ ಗುಜರಾತ್ ಲಯನ್ಸ್ ತಂಡ ಕೋಲ್ಕತಾ ತಂಡದ ಗೆಲುವಿಗೆ 184 ರನ್ ಗುರಿ ನೀಡಿತು.
ನಾಯಕ ಸುರೇಶ್ ರೈನಾ(ಅಜೇಯ 68 ರನ್, 51 ಎಸೆತ, 7 ಬೌಂಡರಿ) ಹಾಗೂ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್(47 ರನ್, 25 ಎಸೆತ, 6 ಬೌಂಡರಿ, 2 ಸಿಕ್ಸರ್) ನಾಲ್ಕನೆ ವಿಕೆಟ್‌ಗೆ 87 ರನ್ ಸೇರಿಸಿ ತಂಡದ ಸ್ಪರ್ಧಾತ್ಮಕ ಮೊತ್ತ ಗಳಿಸಲು ಕಾರಣರಾದರು.
ಗುಜರಾತ್ 4ನೆ ಓವರ್‌ನಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಜೇಸನ್ ರಾಯ್(14) ಪಿಯೂಷ್ ಚಾವ್ಲಾಗೆ ವಿಕೆಟ್ ಒಪ್ಪಿಸಿದ್ದರು. ಆಗ 2ನೆ ವಿಕೆಟ್‌ಗೆ 50 ರನ್ ಜೊತೆಯಾಟ ನಡೆಸಿದ ಬ್ರೆಂಡನ್ ಮೆಕಲಮ್(35 ರನ್) ಹಾಗೂ ರೈನಾ ತಂಡವನ್ನು ಆಧರಿಸಿದರು. ಮೆಕಲಮ್ ಹಾಗೂ ಫಿಂಚ್(15) ಬೆನ್ನುಬೆನ್ನಿಗೆ ಔಟಾದಾಗ ಗುಜರಾತ್ ಸ್ಕೋರ್ 3 ವಿಕೆಟ್‌ಗೆ 92 ರನ್.
ದಿನೇಶ್ ಕಾರ್ತಿಕ್‌ರೊಂದಿಗೆ ಕೈಜೋಡಿಸಿದ ರೈನಾ 4ನೆ ವಿಕೆಟ್‌ಗೆ ಉತ್ತಮ ಜೊತೆಯಾಟ ನಡೆಸಿ ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ದರು. ರೈನಾ 41 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ(4,110) ರನ್ ದಾಖಲೆಯನ್ನು ಹಿಂದಿಕ್ಕಿದ ರೈನಾ(4116) ಐಪಿಎಲ್‌ನಲ್ಲಿ ಗರಿಷ್ಠ ಸ್ಕೋರರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕೆಕೆಆರ್ ಪರ ಕುಲ್‌ದೀಪ್ ಯಾದವ್(2-25) ಎರಡು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಬೌಲ್ಟ್(1-40) ಹಾಗೂ ಚಾವ್ಲಾ(1-33) ತಲಾ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಗುಜರಾತ್ ಲಯನ್ಸ್: 20 ಓವರ್‌ಗಳಲ್ಲಿ 183/4
(ಸುರೇಶ್ ರೈನಾ ಅಜೇಯ 68, ದಿನೇಶ್ ಕಾರ್ತಿಕ್ 47, ಮೆಕಲಮ್ 35, ಕುಲ್‌ದೀಪ್ ಯಾದವ್ 2-25)
ಕೋಲ್ಕತಾ ನೈಟ್ ರೈಡರ್ಸ್: 14.5 ಓವರ್‌ಗಳಲ್ಲಿ ವಿಕೆಟ್‌ನಷ್ಟವಿಲ್ಲದೆ 184
(ಕ್ರಿಸ್ ಲಿನ್ ಅಜೇಯ 93, ಗೌತಮ್ ಗಂಭೀರ್ ಅಜೇಯ 76)
ಪಂದ್ಯಶ್ರೇಷ್ಠ: ಕ್ರಿಸ್ ಲಿನ್.







