ಮುಖ್ಯ ಶಿಕ್ಷಕನ ಕೊಲೆ ಪ್ರಕರಣ: ಆರೋಪಿಗಳ ಬಂಧನ

ಮಂಡ್ಯ, ಎ.7: ಮದ್ದೂರು ತಾಲೂಕು ಬಿದರಹೊಸಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಆರ್.ಶಶಿಭೂಷಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶಶಿಭೂಷಣ್ ಪತ್ನಿ ಶಾಂತಮ್ಮ, ಪುತ್ರಿ ನವ್ಯಶ್ರೀ, ಮೈಸೂರಿನ ಸುರೇಶ, ವೆಂಕಟೇಶ್, ಮಹದೇವ ಅಲಿಯಾಸ್ ಶಾಕಾ, ಸಂತೋಷ ಹಾಗೂ ನಂಜುಂಡ ಅಲಿಯಾಸ್ ನಂಜಪ್ಪ ಅವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಸುಧೀರ್‌ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಸುರೇಶ್‌ನಿಂದ ಕೃತ್ಯಕ್ಕೆ ಬಳಸಿದ ಮೂರು ಬ್ಯಾಂಕ್ ಪಾಸ್ ಪುಸ್ತಕ, ಐದು ಕೀಗಳಿರುವ ಗೊಂಚಲು, ಹಣದ ಪರ್ಸ್, ಡೈರಿ, ಎರಡು ಮೊಬೈಲ್ ಫೋನ್, ಕೃತ್ಯಕ್ಕೆ ಮುಂಗಡವಾಗಿ ಪಡೆದಿದ್ದ 7,740 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ವೆಂಕಟೇಶ್‌ನಿಂದ ಕೃತ್ಯಕ್ಕೆ ಬಳಸಿದ ಕಾರು, ಮಹದೇವ ಮತ್ತು ಎರಡು ಮಚ್ಚು, ಸಂತೋಷನಿಂದ ಮಚ್ಚು, ಮೊಬೈಲ್ ಫೋನ್ ಹಾಗೂ ನಂಜುಂಡ, ಶಾಂತಮ್ಮ, ನವ್ಯಶ್ರೀ ಅವರಿಂದ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೆ.ಎಂ.ದೊಡ್ಡಿ ವೃತ್ತದ ಸಿಪಿಐ ಶಿವಮಲವಯ್ಯ ನೇತೃತ್ವದ ತಂಡದ ಕೆ.ಎಂ.ದೊಡ್ಡಿ ಪಿಎಸ್‌ಐ ಅಯ್ಯನಗೌಡ, ಹಲಗೂರು ಪಿಎಸ್‌ಐ ಬಿ.ಎಸ್.ಶ್ರೀಧರ್, ಅರಕೆರೆ ಪಿಎಸ್‌ಐ ಅಜರುದ್ದೀನ್, ಶ್ರೀರಂಗಪಟ್ಟಣ ಪಿಎಸ್‌ಐ ಪುನೀತ್, ಸಿಬ್ಬಂದಿಗಳಾದ ಗೋವಿಂದಪ್ಪ, ಗಯಾಜ್ ಉದ್ದೀನ್ ಖಾನ್, ಮಹದೇವ, ಜಯರಾಮೇಗೌಡ, ಜಯರಾಮು, ಮಂಜುನಾಥ್, ರವಿ ಅವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಎಸ್ಪಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮಾರ್ಚ್ 31ರಂದು ಬೆಳಗ್ಗೆ 9.30ರ ಸಮಯದಲ್ಲಿ ಮಂಡ್ಯದಿಂದ ಬಿದರಹೊಸಹಳ್ಳಿಯ ಶಾಲೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ಆರ್.ಶಶಿಭೂಷಣ್ ಅವರನ್ನು ಅರೆಚಾಕನಹಳ್ಳಿ ಬಳಿ ದುಷ್ಕರ್ಮಿಗಳು ಅಡ್ಡಗಟ್ಟಿ ಕುತ್ತಿಗೆಯನ್ನು ಕೊಯ್ದು ಕೊಲೆಮಾಡಿ ಪರಾರಿಯಾಗಿದ್ದರು.
ಎರಡು ದಿನದಲ್ಲಿ ಶಶಿಭೂಷಣ್ ಪತ್ನಿ ಶಾಂತಮ್ಮ, ಪುತ್ರಿ ನವ್ಯಶ್ರೀ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ತಾವು ದುಷ್ಕರ್ಮಿಗಳಿಗೆ ಸುಪಾರಿ ನೀಡಿ ಕೊಲೆ ಮಾಡಿಸಿದ್ದನ್ನು ಒಪ್ಪಿಕೊಂಡಿದ್ದರು.







