ಒಲಿಂಪಿಯನ್ ಅಥ್ಲೀಟ್ ಜೆಮಿಮಾ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಅನುತ್ತೀರ್ಣ

ನೈರೋಬಿ, ಎ.7: ಒಲಿಂಪಿಕ್ ಗೇಮ್ಸ್‌ನಲ್ಲಿ ಮ್ಯಾರಥಾನ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದ ಕೀನ್ಯದ ಮೊದಲ ಮಹಿಳಾ ಓಟಗಾರ್ತಿ ಜೆಮಿಮಾ ಸಮ್‌ಗಾಂಗ್ ಸ್ಪರ್ಧೆಯಿಲ್ಲದ ಸಮಯದಲ್ಲಿ ನಡೆಸಿರುವ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ ಎಂದು ಅಥ್ಲೆಟಿಕ್ಸ್ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಕಳೆದ ವರ್ಷ ರಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದ 32ರ ಹರೆಯದ ಜೆಮಿಮಾ 2016ರ ಲಂಡನ್ ಮ್ಯಾರಥಾನ್‌ನಲ್ಲಿ ಚಾಂಪಿಯನ್ ಆಗಿದ್ದಾರೆ.
ಜೆಮಿಮಾ ಅವರ ದೇಶದಲ್ಲಿ ಅಂತಾರಾಷ್ಟ್ರೀಯ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್(ಐಎಎಎಫ್) ನಡೆಸಿದ ಡೋಪಿಂಗ್ ಪರೀಕ್ಷೆಯಲ್ಲಿ ಜೆಮಿಮಾ ನಿಷೇಧಿತ ಉದ್ದೀಪನಾ ದ್ರವ್ಯ ಇಪಿಒ ಸೇವಿಸಿರುವುದು ಪತ್ತೆಯಾಗಿದೆ. ಕೀನ್ಯ ಅಥ್ಲೀಟ್ ಜೆಮಿಮಾ ಸಮ್‌ಗಾಂಗ್ ವಿರುದ್ಧ ಡೋಪಿಂಗ್ ವಿರೋಧಿ ನಿಯಮ ಉಲ್ಲಂಘನೆಯ ಪ್ರಕರಣವನ್ನು ಈ ವಾರ ದಾಖಲಿಸಲಾಗುತ್ತದೆ. ಯಾವುದೇ ಮುನ್ಸೂಚನೆ ನೀಡದೆ ಕೀನ್ಯ ಅಥ್ಲೀಟ್‌ಗೆ ನಡೆಸಲಾಗಿರುವ ಡೋಪಿಂಗ್ ಟೆಸ್ಟ್‌ನಲ್ಲಿ ಉದ್ದೀಪನಾ ಮದ್ದು ಸೇವಿಸಿರುವುದು ಸಾಬೀತಾಗಿದೆ ಎಂದು ಐಎಎಎಫ್ ತಿಳಿಸಿದೆ.
ಜೆಮಿಮಾ ಇಥಿಯೋಪಿಯದ ವಿಶ್ವ ಚಾಂಪಿಯನ್ ಮೇರಿ ಡಿಬಾಬಾರನ್ನು ಹಿಂದಕ್ಕಿ ವರ್ಷದ ವಿಶ್ವದ ನಂ.1 ಓಟಗಾರ್ತಿಯಾಗಿ ಹೊರಹೊಮ್ಮಿದ್ದರು. ಜೆಮಿಮಾ ಎ.23 ರಿಂದ ಆರಂಭವಾಗಲಿರುವ ಲಂಡನ್ ಮ್ಯಾರಥಾನ್‌ನಲ್ಲಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೆ, ಇದೀಗ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಅವರ ವೃತ್ತಿಜೀವನ ಗೊಂದಲದಲ್ಲಿದೆ.





