ಐಪಿಎಲ್: ಧೋನಿಗೆ ವಾಗ್ದಂಡನೆ

ಹೊಸದಿಲ್ಲಿ, ಎ.7: ರೈಸಿಂಗ್ ಪುಣೆ ಸೂಪರ್ ಜೈಂಟ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದ ಐಪಿಎಲ್ ಪಂದ್ಯದ ವೇಳೆ ಟೂರ್ನಿಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಮಹೇಂದ್ರ ಸಿಂಗ್ ಧೋನಿಗೆ ವಾಗ್ದಂಡನೆ ವಿಧಿಸಲಾಗಿದೆ.
‘‘ಧೋನಿ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ವರ್ತಿಸುವ ಮೂಲಕ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಈ ವಿಚಾರದಲ್ಲಿ ಮ್ಯಾಚ್ ರೆಫರಿಯ ನಿರ್ಧಾರವೇ ಅಂತಿಮ’’ ಎಂದು ಐಪಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪುಣೆ ಹಾಗೂ ಮುಂಬೈ ನಡುವೆ ನಡೆದ ಅತ್ಯಂತ ಪೈಪೋಟಿಯಿಂದ ಕೂಡಿದ್ದ ಪಂದ್ಯದ 15ನೆ ಓವರ್‌ನಲ್ಲಿ ಸ್ಪಿನ್ನರ್ ತಾಹಿರ್ ಎಸೆತದಲ್ಲಿ ಪೊಲಾರ್ಡ್ ವಿರುದ್ಧ ಧೋನಿ, ತಾಹಿರ್, ನಾಯಕ ಸ್ಮಿತ್ ಎಲ್‌ಬಿಡಬ್ಲು ಔಟ್‌ಗಾಗಿ ಅಂಪೈರ್ ರವಿಗೆ ಮನವಿ ಮಾಡಿದ್ದರು. ಅಂಪೈರ್ ನಾಟೌಟ್ ತೀರ್ಪು ನೀಡಿದರು. ಆಗ ತಕ್ಷಣವೇ ಧೋನಿ ಅಂಪೈರ್ ತೀರ್ಪು ಪರಾಮರ್ಶೆಗಾಗಿ(ಡಿಆರ್‌ಎಸ್)ಕೈಯಿಂದ ಸನ್ನೆ ಮಾಡಿದ್ದರು. ಆದರೆ, ಐಪಿಎಲ್‌ನಲ್ಲಿ ಡಿಆರ್‌ಎಸ್ ಬಳಕೆಯಲ್ಲಿಲ್ಲ.
ಮ್ಯಾಚ್ ರೆಫರಿ ಮನು ನಾಯರ್ ಧೋನಿ ಅವರು ಐಪಿಎಲ್ ನಿಯಮ ಆರ್ಟಿಕಲ್ 2.1.1ರ ಪ್ರಕಾರ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ವರ್ತಿಸಿದ್ದಾರೆಂದು ತೀರ್ಮಾನಿಸಿ ವಾಗ್ದಂಡನೆ ವಿಧಿಸಿದ್ದಾರೆ. ಪಂದ್ಯದ ಬಳಿಕ ಧೋನಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ.





