ಪಾನಮತ್ತನಾಗಿ ಅನುಚಿತ ವರ್ತನೆ: ಓ’ಕೀಫೆಗೆ ಭಾರೀ ದಂಡ

ಮೆಲ್ಬೋನ್, ಎ.7: ಕ್ರಿಕೆಟ್ ಕಾರ್ಯಕ್ರಮವೊಂದರಲ್ಲಿ ಪಾನಮತ್ತನಾಗಿ ‘‘ಅತ್ಯಂತ ಅನುಚಿತ’’ವಾಗಿ ವರ್ತಿಸಿದ ಆಸ್ಟ್ರೇಲಿಯದ ಟೆಸ್ಟ್ ಬೌಲರ್ ಸ್ಟೀಫನ್ ಓ’ಕೀಫೆಗೆ 20,000 ಆಸ್ಟ್ರೇಲಿಯನ್ ಡಾಲರ್(15,000 ಯುಎಸ್ ಡಾಲರ್)ದಂಡ ವಿಧಿಸಲಾಗಿದ್ದು, ಕೌನ್ಸಿಲಿಂಗ್‌ನಲ್ಲಿ ಭಾಗವಹಿಸುವಂತೆ ಸೂಚಿಸಲಾಗಿದೆ.
ಇತ್ತೀಚೆಗೆ ಆಸ್ಟ್ರೇಲಿಯ ತಂಡ ಟೆಸ್ಟ್ ಸರಣಿಯನ್ನಾಡಲು ಭಾರತಕ್ಕೆ ಪ್ರವಾಸಕೈಗೊಂಡಿದ್ದಾಗ ಗಮನಾರ್ಹ ಪ್ರದರ್ಶನ ನೀಡಿದ್ದ ಸ್ಪಿನ್ ಬೌಲರ್ ಓ’ಕೀಫೆಯವರನ್ನು ಈವರ್ಷ ಆಸ್ಟ್ರೇಲಿಯದ ಏಕದಿನ ದೇಶೀಯ ಟೂರ್ನಿಯಲ್ಲಿ ಭಾಗವಹಿಸದಂತೆ ನಿಷೇಧಿಸಲಾಗಿದೆ. ಕಳೆದ ವರ್ಷ ಸಿಡ್ನಿ ಹೊಟೇಲ್‌ನಲ್ಲಿ ಪಾನಮತ್ತರಾಗಿ ಅನುಚಿತವಾಗಿ ವರ್ತಿಸಿದ್ದ 32ರ ಹರೆಯದ ಓ’ಕೀಫೆ ಇದೀಗ ಮತ್ತೊಮ್ಮೆ ಹಳೆ ಚಾಳಿಯನ್ನು ಪುನರಾವರ್ತಿಸಿ ಶಿಕ್ಷೆಗೆ ಗುರಿಯಾಗಿದ್ದಾರೆ.
‘‘ಆಸ್ಟ್ರೇಲಿಯ ಕ್ರಿಕೆಟ್‌ನಲ್ಲಿ ನಮ್ಮ ಯಾವುದೇ ಆಟಗಾರರ ಅಸಭ್ಯ ವರ್ತನೆಯನ್ನು ಸಹಿಸಿಕೊಳ್ಳುವುದಿಲ್ಲ. ಈ ವಿಷಯದಲ್ಲಿ ನಾವು ಎಳ್ಳಷ್ಟೂ ಸಹಿಸುವುದಿಲ್ಲ. ಇಂತಹ ಘಟನೆ ನಡೆದಿರುವುದಕ್ಕೆ ನಮಗೆ ತೀವ್ರ ಬೇಸರವಾಗಿದೆ. ಓ’ಕೀಫೆ ಅವರ ವರ್ತನೆ ಭಾರತದಲ್ಲಿ ನೀಡಿರುವ ಉತ್ತಮ ಪ್ರದರ್ಶನವನ್ನು ಮರೆ ಮಾಚಿದೆ’’ ಎಂದು ಕ್ರಿಕೆಟ್ ಆಸ್ಟ್ರೇಲಿಯದ ಅಧಿಕಾರಿ ಪ್ಯಾಟ್ ಹೊವಾರ್ಡ್ ಹೇಳಿದ್ದಾರೆ.
‘‘ನನ್ನ ತಪ್ಪಿಗೆ ಕ್ಷಮೆಯಿಲ್ಲ. ತಪ್ಪಿಗೆ ಕ್ಷಮೆಕೋರುವ ಜೊತೆಗೆ ಎಲ್ಲದಕ್ಕೂ ನಾನೇ ಜವಾಬ್ದಾರಿಯಾಗಿದ್ದೇನೆ. ದಂಡವನ್ನು ಕಟ್ಟುವ ಮೂಲಕ ವಿಶೇಷ ಕೌನ್ಸಿಲಿಂಗ್‌ಗೆ ಒಳಗಾಗುವೆ’’ ಎಂದು 2014ರಲ್ಲಿ ಚೊಚ್ಚಲ ಟೆಸ್ಟ್ ಆಡಿದ ಬಳಿಕ 8 ಟೆಸ್ಟ್‌ಗಳಲ್ಲಿ ಒಟ್ಟು 33 ವಿಕೆಟ್‌ಗಳನ್ನು ಕಬಳಿಸಿದ್ದ ಎಡಗೈ ಸ್ಪಿನ್ನರ್ ಓ’ಕೀಫೆ ಹೇಳಿದ್ದಾರೆ.







