ಇಂದು ಡೆಲ್ಲಿ ಡೆವಿಲ್ಸ್ ವಿರುದ್ಧ ಗೆಲುವಿನ ವಿಶ್ವಾಸದಲ್ಲಿ ಆರ್‌ಸಿಬಿ

ಬೆಂಗಳೂರು, ಎ.7: ಐಪಿಎಲ್‌ನ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶನಿವಾರ ಇಲ್ಲಿ ನಡೆಯಲಿರುವ ತನ್ನ 2ನೆ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.
ಆರ್‌ಸಿಬಿ ತಂಡ ಖಾಯಂ ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಕೆ.ಎಲ್.ರಾಹುಲ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದೆ. ಕೊಹ್ಲಿ ಹಾಗೂ ಡಿವಿಲಿಯರ್ಸ್ ಶೀಘ್ರವೇ ಫಿಟ್‌ನೆಸ್ ಪಡೆಯುವ ಸಾಧ್ಯತೆಯಿದೆ. ರಾಹುಲ್ ಇಡೀ ಟೂರ್ನಿಯಿಂದ ಹೊರ ನಡೆದಿದ್ದಾರೆ. ಪ್ರತಿಭಾವಂತ ಯುವ ಆಟಗಾರ ಸರ್ಫರಾಝ್ ಖಾನ್ ಅಭ್ಯಾಸದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದಾಗ ಗಾಯಗೊಂಡಿದ್ದು, ಟೂರ್ನಿಯಿಂದ ಹೊರನಡೆಯುವ ನಿರೀಕ್ಷೆಯಿದೆ. ಕಳೆದ ಪಂದ್ಯದಲ್ಲಿ ಬ್ಯಾಟ್ ಹಾಗೂ ಬೌಲಿಂಗ್‌ನಲ್ಲಿ ವಿಫಲವಾಗಿದ್ದ ಶೇನ್ ವ್ಯಾಟ್ಸನ್ ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.
ಉದ್ಘಾಟನಾ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ 35 ರನ್‌ಗಳಿಂದ ಸೋತಿರುವ ಆರ್‌ಸಿಬಿ ತಂಡದಲ್ಲಿ ಸ್ಟಾರ್ ಆಟಗಾರರ ಅನುಪಸ್ಥಿತಿ ಎದ್ದುಕಾಣುತ್ತಿದೆ. ಮೊದಲ ಪಂದ್ಯದಲ್ಲಿ ಹೈದರಾಬಾದ್ 4 ವಿಕೆಟ್‌ಗೆ 207 ರನ್ ಗಳಿಸಿದ್ದರೆ, ಇದಕ್ಕೆ ಉತ್ತರವಾಗಿ ಆರ್‌ಸಿಬಿ ತಂಡ 19.4 ಓವರ್‌ಗಳಲ್ಲಿ 172 ರನ್‌ಗೆ ಆಲೌಟಾಗಿತ್ತು. ಆರ್‌ಸಿಬಿ ಕಳೆದ 23 ಪಂದ್ಯಗಳಲ್ಲಿ ಮೊದಲ ಬಾರಿ ಆಲೌಟಾಗಿದೆ.
ಹೊಡಿಬಡಿ ದಾಂಡಿಗ ಕ್ರಿಸ್ ಗೇಲ್ ಹಾಗೂ ವ್ಯಾಟ್ಸನ್ ಮೇಲೆ ಆರ್‌ಸಿಬಿ ವಿಶ್ವಾಸವಿರಿಸಿಕೊಂಡಿದ್ದು, ಇಬ್ಬರು ಆಟಗಾರರಿಗೆ ಎದುರಾಳಿಗಳನ್ನು ಹಿಮ್ಮೆಟ್ಟಿಸುವ ಶಕ್ತಿಯಿದೆ. ಆರ್‌ಸಿಬಿ ತವರು ಮೈದಾನದಲ್ಲಿ ಆಡುತ್ತಿರುವ ಕಾರಣ ಡೆಲ್ಲಿಯ ವಿರುದ್ಧ ಮೇಲುಗೈ ಸಾಧಿಸಲು ಸಾಧ್ಯತೆಯಿದೆ.
ಬೌಲಿಂಗ್ ವಿಭಾಗದಲ್ಲಿ ಆರ್‌ಸಿಬಿ ಟಿಮೈಲ್ ಮಿಲ್ಸ್ ಹಾಗೂ ಯುಝ್ವೇಂದ್ರ ಚಾಹಲ್‌ರನ್ನು ಹೆಚ್ಚು ಅವಲಂಬಿಸಿದೆ. ಆದರೆ, ಕಳೆದ ಪಂದ್ಯದಲ್ಲಿ ಈ ಇಬ್ಬರು ಬೌಲರ್‌ಗಳು ತಲಾ 1 ವಿಕೆಟ್ ಪಡೆದಿದ್ದರು.
ಮತ್ತೊಂದೆಡೆ ಡೆಲ್ಲಿ ತಂಡ ಈ ಹಿಂದಿನ 9 ಐಪಿಎಲ್ ಟೂರ್ನಿಗಳಲ್ಲಿ ಕಳಪೆ ಪ್ರದರ್ಶನ ನೀಡಿದೆ. ಈ ಬಾರಿ ಟೂರ್ನಿಯ ಆರಂಭದಲ್ಲೇ ಗೆಲುವಿನ ನಿರೀಕ್ಷೆಯಲ್ಲಿದೆ. ಡೆಲ್ಲಿ ತಂಡದಲ್ಲಿ ಕೆಲವು ಸ್ಟಾರ್ ಆಟಗಾರರು ಗಾಯಗೊಂಡಿದ್ದಾರೆ. ದಕ್ಷಿಣ ಆಫ್ರಿಕದ ಕ್ವಿಂಟನ್ ಡಿಕಾಕ್ ಹಾಗೂ ಜೆಪಿ ಡುಮಿನಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ತಂಡದ ಸ್ಟಾರ್ ಆಟಗಾರ ಶ್ರೇಯಸ್ ಅಯ್ಯರ್ ಚಿಕನ್‌ಪಾಕ್ಸ್ ಹಿನ್ನೆಲೆಯಲ್ಲಿ ಕನಿಷ್ಠ 1 ವಾರ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ.
ನಾಯಕ ಝಹೀರ್ ಖಾನ್ ಬೌಲಿಂಗ್ ದಾಳಿಯ ನೇತೃತ್ವವನ್ನು ವಹಿಸಿಕೊಳ್ಳಲಿದ್ದಾರೆ. ರಿಷಬ್ ಪಂತ್, ವಿಂಡೀಸ್ ಟ್ವೆಂಟಿ-20 ನಾಯಕ ಕಾರ್ಲಸ್ ಬ್ರಾತ್‌ವೇಟ್, ಆಸೀಸ್ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಡೆಲ್ಲಿ ತಂಡದ ಪ್ರಮುಖ ಆಟಗಾರರಾಗಿದ್ದಾರೆ.
ಆರ್‌ಸಿಬಿ: ಶೇನ್ ವ್ಯಾಟ್ಸನ್(ನಾಯಕ), ಶ್ರೀನಾಥ್ ಅರವಿಂದ್, ಆವೇಶ್ ಖಾನ್, ಸ್ಯಾಮುಯೆಲ್ ಬದ್ರೀ, ಸ್ಟುವರ್ಟ್ ಬಿನ್ನಿ, ಯುಝ್ವೇಂದ್ರ ಚಾಹಲ್, ಅನಿಕೇತ್ ಚೌಧರಿ, ಪ್ರವೀಣ್ ದುಬೆ, ಕ್ರಿಸ್ ಗೇಲ್, ಟ್ರೆವಿಸ್ ಹೆಡ್, ಇಕ್ಬಾಲ್ ಅಬ್ದುಲ್ಲಾ, ಕೇದಾರ್ ಜಾಧವ್, ಮನ್‌ದೀಪ್ ಸಿಂಗ್, ಟೈಮಲ್ ಮಿಲ್ಸ್, ಆಡಮ್ ಮಿಲ್ನೆ, ಪವನ್ ನೇಗಿ, ಹರ್ಷಲ್ ಪಟೇಲ್, ಸಚಿನ್ ಬೇಬಿ, ಟಬ್ರೈಝ್ ಶಂಸಿ, ಬಿಲ್ಲಿ ಸ್ಟಾನ್‌ಲೇಕ್, ವಿರಾಟ್ ಕೊಹ್ಲಿ ಹಾಗೂ ಡಿವಿಲಿಯರ್ಸ್.ಸ
ಡೆಲ್ಲಿ ಡೇರ್ ಡೆವಿಲ್ಸ್: ಝಹೀರ್‌ಖಾನ್(ನಾಯಕ), ಮುಹಮ್ಮದ್ ಶಮಿ, ಶಹ್‌ಬಾಝ್ ನದೀಂ, ಜಯಂತ್ ಯಾದವ್, ಅಮಿತ್ ಮಿಶ್ರಾ, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಕರುಣ್ ನಾಯರ್, ರಿಷಬ್ ಪಂತ್, ಮಿಲಿಂದ್, ಖಲೀಲ್ ಅಹ್ಮದ್, ಪ್ರತ್ಯುಷ್ ಸಿಂಗ್, ಎಂ.ಅಶ್ವಿನ್, ಆದಿತ್ಯ ತಾರೆ, ಶಶಾಂಕ್ ಸಿಂಗ್, ಅಂಕಿತ್ ಬವಾನೆ, ನವ್‌ದೀಪ್ ಸೈನಿ, ಕೋರಿ ಆ್ಯಂಡರ್ಸನ್, ಆ್ಯಂಜೆಲೊ ಮ್ಯಾಥ್ಯೂಸ್, ಪ್ಯಾಟ್ ಕಮಿನ್ಸ್, ಕಾಗಿಸೊ ರಬಾಡ, ಕ್ರಿಸ್ ಮೊರಿಸ್, ಕಾರ್ಲಸ್ ಬ್ರಾತ್‌ವೇಟ್, ಸ್ಯಾಮ್ ಬಿಲ್ಲಿಂಗ್ಸ್.
ಪಂದ್ಯದ ಸಮಯ: ರಾತ್ರಿ 8:00
ಇಂದು ಪುಣೆ-ಪಂಜಾಬ್ ಸೆಣಸಾಟ
ಇಂದೋರ್, ಎ.7: ಕಳೆದ ಎರಡು ಟೂರ್ನಮೆಂಟ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಶನಿವಾರ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಪುಣೆ ತಂಡ ಶುಕ್ರವಾರ ಪುಣೆಯಲ್ಲಿ ನಡೆದಿದ್ದ ಮುಂಬೈ ವಿರುದ್ಧದ ತನ್ನ ಮೊದಲ ಐಪಿಎಲ್ ಪಂದ್ಯವನ್ನು 7 ವಿಕೆಟ್‌ಗಳ ಅಂತರದಿಂದ ರೋಚಕವಾಗಿ ಗೆದ್ದುಕೊಂಡು ಶುಭಾರಂಭ ಮಾಡಿದೆ.
ಪಂಜಾಬ್‌ಗೆ ಈ ಬಾರಿ ಎಲ್ಲವೂ ಹೊಸತು. ಗ್ಲೆನ್ ಮ್ಯಾಕ್ಸ್‌ವೆಲ್ ಮೊದಲ ಬಾರಿ ತಂಡದ ನಾಯಕತ್ವವಹಿಸಿಕೊಂಡಿದ್ದು, ಮೊಹಾಲಿಯ ಬದಲಿಗೆ ಹೋಳ್ಕರ್ ಸ್ಟೇಡಿಯಂನಲ್ಲಿ ತವರು ಪಂದ್ಯಗಳನ್ನು ಆಡಲಿದೆ.
ಪಂಜಾಬ್ ತಂಡದಲ್ಲಿ ಇಯಾನ್ ಮೊರ್ಗನ್, ಡೇವಿಡ್ ಮಿಲ್ಲರ್, ಹಾಶಿಮ್ ಅಮ್ಲ, ಮಾರ್ಟಿನ್ ಗಪ್ಟಿಲ್, ಶಾನ್ ಮಾರ್ಷ್ ಹಾಗೂ ಮಾರ್ಕಸ್ ಸ್ಟೊನಿಸ್‌ರಂತಹ ಮ್ಯಾಚ್ ವಿನ್ನರ್‌ಗಳಿದ್ದಾರೆ. ಪುಣೆ ತಂಡದ ಬ್ಯಾಟಿಂಗ್ ಬಲಿಷ್ಠವಾಗಿದೆ. ದಕ್ಷಿಣ ಆಫ್ರಿಕದ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ಮುಂಬೈ ವಿರುದ್ಧ ಪಂದ್ಯದಲ್ಲಿ ಸ್ಪಿನ್ ಜಾದೂವಿನಿಂದ ಗಮನ ಸೆಳೆದಿದ್ದರು. ಇದೀಗ ತನ್ನ 2ನೆ ಪಂದ್ಯದಲ್ಲಿ ಪಂಜಾಬ್ ತಂಡಕ್ಕೂ ಸವಾಲಾಗಲು ಎದುರು ನೋಡುತ್ತಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್: ಮನನ್ ವೋರ, ಅಕ್ಷರ್ ಪಟೇಲ್,ಗ್ಲೆನ್ ಮ್ಯಾಕ್ಸ್‌ವೆಲ್(ನಾಯಕ), ಗುರುಕೀರತ್ ಸಿಂಗ್, ಅನುರೀತ್ ಸಿಂಗ್, ಸಂದೀಪ್ ಶರ್ಮ, ಶಾನ್ ಮಾರ್ಷ್, ವೃದ್ದಿಮಾನ್ ಸಹಾ, ಮುರಳಿ ವಿಜಯ್, ನಿಖಿಲ್ ನಾಯಕ್, ಮೋಹಿತ್ ಶರ್ಮ, ಮಾರ್ಕಸ್ ಸ್ಟೋನಿಸ್, ಕೆಸಿ ಕಾರಿಯಪ್ಪ, ಅರ್ಮಾನ್ ಜಾಫರ್, ಪ್ರದೀಪ್ ಸಾಹು, ಸ್ವಪ್ನೀಲ್ ಸಿಂಗ್, ಹಾಶಿಮ್ ಅಮ್ಲ, ವರುಣ್ ಆ್ಯರೊನ್, ಇಯಾನ್ ಮೊರ್ಗನ್, ಮ್ಯಾಟ್ ಹೆನ್ರಿ, ರಾಹುಲ್, ಮಾರ್ಟಿನ್ ಗಪ್ಟಿಲ್, ಡರೆನ್ ಸಮ್ಮಿ, ರಿಂಕು ಸಿಂಗ್, ನಟರಾಜನ್.
ರೈಸಿಂಗ್ ಪುಣೆ ಸೂಪರ್‌ಜೈಂಟ್: ಸ್ಟೀವ್ ಸ್ಮಿತ್(ನಾಯಕ), ಮಾಯಾಂಕ್ ಅಗರವಾಲ್, ಅಂಕಿತ್ ಶರ್ಮ, ಬಾಬಾ ಅಪರಾಜಿತ್, ಅಂಕುಶ್ ಬೈನ್ಸ್, ರಜತ್ ಭಾಟಿಯ, ದೀಪಕ್ ಚಾಹರ್, ರಾಹುಲ್ ಚಾಹರ್, ಕ್ರಿಸ್ಟಿಯಾನ್, ಎಂಎಸ್ ಧೋನಿ, ಅಶೋಕ್ ದಿಂಡ, ಎಫ್‌ಡು ಪ್ಲೆಸಿಸ್, ಫರ್ಗ್ಯುಸನ್, ಇಮ್ರಾನ್ ತಾಹಿರ್, ಜಸ್ಕರಣ್ ಸಿಂಗ್, ಉಸ್ಮಾನ್ ಖ್ವಾಜಾ, ಅಜಿಂಕ್ಯ ರಹಾನೆ, ಸೌರಭ್ ಕುಮಾರ್, ಬೆನ್ ಸ್ಟೋಕ್ಸ್, ಮಿಲಿಂದ್ ಟಂಡನ್, ಮನೋಜ್ ತಿವಾರಿ, ಆಡಮ್ ಝಾಂಪ, ಜಯದೇವ್ ಉನದ್ಕಟ್, ಈಶ್ವರ ಪಾಂಡೆ, ರಾಹುಲ್ ತ್ರಿಪಾಠಿ, ಶಾರ್ದೂಲ್ ಠಾಕೂರ್.
ಪಂದ್ಯ ಆರಂಭದ ಸಮಯ: ಸಂಜೆ 4:00







