ಇವರಿಗೆ ಯಾವುದೇ ಬೆಲೆ ತೆತ್ತಾದರೂ ಐದು ದನದ ತಲೆಗಳು ಬೇಕಾಗಿದ್ದವು
ಏಕೆ ಎಂದು ಕೇಳಿದ್ದಕ್ಕೆ ಓಡಿಯೇ ಹೋದರು!

ಕೊಲ್ಕತ್ತಾ, ಎ.8: ರಾಮ ನವಮಿಯ ದಿನ ಪಶ್ಚಿಮ ಬಂಗಾಳದ ಬಿರ್‌ಭುಮ್ ಜಿಲ್ಲೆಯ ರಾಜನಗರ ಎಂಬ ಪಟ್ಟಣದಲ್ಲಿ ಎಷ್ಟು ಬೆಲೆ ತೆತ್ತಾದರೂ ಐದು ಹಸುಗಳ ತಲೆ ಖರೀದಿಸಲು ಮೂವರು ಹಿಂದೂಗಳು ಸಿದ್ಧರಿದ್ದರು. ಇದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಯಿತು. ಜನ ಸಹಜವಾಗಿಯೇ ಅನುಮಾನಗೊಂಡು ಏಕೆ ಎಂದು ಪ್ರಶ್ನಿಸಿದರು. ಈ ಪ್ರಶ್ನೆ ಎದುರಾದ ತಕ್ಷಣ ದನದ ತಲೆ ಖರೀದಿಸಲು ಬಂದ ಮೂವರು ಕಾಲಿಗೆ ಬುದ್ಧಿ ಹೇಳಿದ ಸ್ವಾರಸ್ಯಕರ ಘಟನೆಯ ವೀಡಿಯೊ, ಚಿತ್ರ ಹಾಗೂ ವರದಿಯನ್ನು ಸ್ಥಳೀಯ ಪತ್ರಕರ್ತ ಖಾನ್ ಸಾಹಿಲ್ ಮಝಹರ್ ಬೆಳಕಿಗೆ ತಂದಿದ್ದಾರೆ.
ಕೇರಳ, ಅರುಣಾಚಲ ಪ್ರದೇಶ, ಮಿಜೊರಾಂ, ಮೇಘಾಲಯ, ನಾಗಲ್ಯಾಂಡ್, ತ್ರಿಪುರಾ ಹಾಗೂ ಸಿಕ್ಕಿಂನಂತೆ ಪಶ್ಚಿಮ ಬಂಗಾಳದಲ್ಲೂ ಕಾನೂನುಬದ್ಧವಾಗಿ ಗೋವಧೆಗೆ ಅವಕಾಶವಿದೆ.
ಘಟನೆ ವಿವರ ಹೀಗಿದೆ... ರಾಜನಗರದ ಮುಖ್ಯ ಮಾರುಕಟ್ಟೆಗೆ ಆಗಮಿಸಿದ ಮೂವರು ಹಿಂದೂಗಳು ಐದು ಹಸುಗಳ ತಲೆ ಬೇಕೆಂದು ಕೇಳಿದರು. ಕಟುಕ ಸಾಮಾನ್ಯ ಬೆಲೆಗಿಂತ ಮೂರುಪಟ್ಟು ಬೆಲೆ ನಿಗದಿಪಡಿಸಿದ. ಬಂದಿದ್ದ ಯುವಕರು ಯಾವ ಚೌಕಾಸಿಯೂ ಇಲ್ಲದೇ ಅದಕ್ಕೆ ಒಪ್ಪಿಕೊಂಡರು. ಆದರೆ ತನ್ನ ಬಳಿ ಐದು ತಲೆಗಳಿಲ್ಲ. ನನ್ನಲ್ಲಿರುವ ಮೂರನ್ನು ನೀಡುತ್ತೇನೆ ಎಂದು ಕಟುಕ ಹೇಳಿದ.
ಇದನ್ನು ಖರೀದಿಸಿ ಗೋಣಿಚೀಲಕ್ಕೆ ತುಂಬಿಸಿಕೊಳ್ಳುತ್ತಿದ್ದುದನ್ನು ಮತ್ತೊಬ್ಬ ನೋಡಿದ. ದನದ ಚರ್ಮದ ಬದಲು ತಲೆ ಖರೀದಿಸುತ್ತಿರುವುದು ಆತನಲ್ಲಿ ಅನುಮಾನ ಮೂಡಿಸಿತು. ಆತ ಮಾರುಕಟ್ಟೆಯ ಇತರರಲ್ಲಿ ತನ್ನ ಸಂದೇಹ ಹಂಚಿಕೊಂಡ. ತಕ್ಷಣ ಅಕ್ಕಪಕ್ಕದ ಎಲ್ಲರೂ ಸೇರಿ ಆ ಮೂವರನ್ನು ವಿಚಾರಿಸಲು ಆರಂಭಿಸಿದರು. ಯಾಕಾಗಿ ಹಸುವಿನ ತಲೆ ಖರೀದಿಸುತ್ತೀದ್ದೀರಿ ಎಂದು ಪ್ರಶ್ನಿಸಿದರು. ಆಗ ಮಾರುಕಟ್ಟೆಯಲ್ಲಿ ನಿಯತವಾಗಿ ಹಸುವಿನ ಚರ್ಮ ಖರೀದಿಸಲು ಬರುತ್ತಿದ್ದ ಸುಫಲ್ ದಾಸ್ ಎಂಬಾತ, ''ಗ್ರಾಮದಲ್ಲಿ ಒಬ್ಬ ವ್ಯಕ್ತಿ ಅಸ್ವಸ್ಥಗೊಂಡಿದ್ದು, ಆತನ ಚಿಕಿತ್ಸೆಗಾಗಿ ದನದ ತಲೆ ತರುವಂತೆ ಸ್ಥಳೀಯ ವೈದ್ಯ ಹೇಳಿದ್ದಾರೆ" ಎಂಬ ಕಥೆ ಕಟ್ಟಿದ. ಇದು ಸ್ಥಳೀಯರ ಅನುಮಾನ ಮತ್ತಷ್ಟು ಬಲಗೊಳ್ಳಲು ಕಾರಣವಾಯಿತು. ಒಂದು ಅಥವಾ ಎರಡು ತಲೆ ಬದಲು ಐದು ತಲೆ ಏಕೆ ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿತು. ಇದಕ್ಕೆ ಆ ಮೂವರಲ್ಲಿ ಉತ್ತರ ಇರಲಿಲ್ಲ. ಆಗ ಒಬ್ಬ ವ್ಯಕ್ತಿ ಅಲ್ಲಿಂದ ಪಲಾಯನ ಮಾಡಿದ. ಹಲವು ಪ್ರಶ್ನೆಗಳು ಎದುರಾದ ತಕ್ಷಣ ಮತ್ತಿಬ್ಬರೂ ಜಾಗ ಖಾಲಿ ಮಾಡಿದರು.
ಇಡೀ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಇದೀಗ ಪಟ್ಟಣದ ಜನತೆ ಪೊಲೀಸರಿಗೆ ದೂರು ನೀಡಿ ಆಗ್ರಹಿಸಿದ್ದಾರೆ. ಹಸುಗಳ ತಲೆಯನ್ನು ಸೂಕ್ಷ್ಮ ಪ್ರದೇಶದಲ್ಲಿ ಎಸೆದು ಗಲಭೆ ಹಬ್ಬಿಸುವ ಸಂಚು ರೂಪಿಸಿರಬೇಕು ಎಂದು ಶಂಕಿಸಲಾಗಿದೆ.