ಪೊಲೀಸ್ ದೌರ್ಜನ್ಯ ಖಂಡಿಸಿ ಕಾಸರಗೋಡಿನಲ್ಲಿ ಹರತಾಳ
ಪೊಲೀಸ್ ವಶದಲ್ಲಿ ಯುವಕ ಮೃತ್ಯು ಪ್ರಕರಣ

ಕಾಸರಗೋಡು, ಎ.8: ಪೊಲೀಸ್ ಕಸ್ಟಡಿಯಲ್ಲಿ ಯುವಕ ಮೃತಪಟ್ಟ ಘಟನೆ ಯನ್ನು ಖಂಡಿಸಿ ಬಿಜೆಪಿ ಕರೆ ನೀಡಿರುವ ಕಾಸರಗೋಡು ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಕಾಸರಗೋಡು ನಗರ ಹಾಗೂ ಹೊರವಲಯದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿವೆ. ಕೆಲವೇ ಕೆಲ ಖಾಸಗಿ ವಾಹನಗಳು ಮಾತ್ರ ಸಂಚಾರ ನಡೆಸುತ್ತಿವೆ. ಹರತಾಳವು ಸಂಜೆ ಆರರ ತನಕ ಮುಂದುವರಿಯಲಿದೆ. ಬಂದ್ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಬಸ್ಸು, ವಾಹನ ಸೌಲಭ್ಯ ಇಲ್ಲದೆ ಪ್ರಯಾಣಿಕರು ಪರದಾಡುವಂತ ಸ್ಥಿತಿ ಉಂಟಾಗಿದೆ. ರೈಲುಗಳಲ್ಲಿ ಆಗಮಿಸಿದ ಪ್ರಯಾಣಿಕರಿಗೆ ಕಾಸರಗೋಡಿನಲ್ಲಿ ಬಂದಿಳಿದಾಗಲೇ ಹರತಾಳದ ಬಗ್ಗೆ ಮಾಹಿತಿ ಲಭಿಸಿದ್ದು, ವಾಹನ ಸೌಲಭ್ಯ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದರು.
ಸರಕಾರಿ ಕಚೇರಿಗಳಲ್ಲಿ ಹಾಜರಾತಿ ವಿರಳವಾಗಿತ್ತು. ಮಂಗಳೂರು ಮತ್ತು ತಲಪಾಡಿಯಿಂದ ಸಂಚರಿಸುವ ಬಸ್ಸುಗಳು ಕುಂಬಳೆ ತನಕ ಸಂಚರಿಸುತ್ತಿವೆ.
ವಾರದ ಅವಧಿಯಲ್ಲಿ ಎರಡು ಹರತಾಳ ನಡೆದುದರಿಂದ ಜನತೆ ಸಮಸ್ಯೆ ಎದುರಿಸುವಂತಾಗಿದೆ. ಕಾಲೇಜು ಆಡಳಿತ ಮಂಡಳಿಯ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಎಂಜಿನಿಯರಿಂಗ್ ವಿದ್ಯಾರ್ಥಿ ಜಿಷ್ಣು ಪ್ರಣೋಯ್ ಕುಟುಂಬಸ್ಥರ ಮೇಲೆ ಪೊಲೀಸ್ ದೌರ್ಜನ್ಯ ಪ್ರತಿಭಟಿಸಿ ಗುರುವಾರ ಯುಡಿಎಫ್ ಮತ್ತು ಬಿಜೆಪಿ ಹರತಾಳ ನಡೆಸಿತ್ತು.
ಸಂದೀಪ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು ನಡೆಸಲಿದೆ.
ದೌರ್ಜನ್ಯದ ಎಸಗಿದ ಆರೋಪಕ್ಕೆ ತುತ್ತಾಗಿರುವ ಕಾಸರಗೋಡು ನಗರ ಠಾಣಾ ಸಬ್ ಇನ್ ಸ್ಪೆಕ್ಟರ್ ಅಜಿತ್ ಕುಮಾರ್ ಅವರನ್ನು ಸಶಸ್ತ್ರ ಮೀಸಲು ಪಡೆಗೆ ವರ್ಗಾಯಿಸಲಾಗಿದೆ. ಅವರ ಬದಲಿಗೆ ಎಎಸ್ಸೈ ಕೆ.ಅಂಬಾಡಿಯವರಿಗೆ ಎಸ್ಸೈ ಜವಾಬ್ದಾರಿ ನೀಡಲಾಗಿದೆ.
ಎಸ್ಸೈ ಅಜಿತ್‌ಕುಮಾರ್ ಅವರು ಸಂದೀಪ್ ಮೇಲೆ ಪೊಲೀಸ್ ಜೀಪಿನಲ್ಲಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇಡೀ ಪ್ರಕರಣದ ಬಗ್ಗೆ ತನಿಖೆಯ ಜವಾಬ್ದಾರಿಯನ್ನು ವಿಶೇಷ ಅಪರಾಧ ಪತ್ತೆ ದಳದ ಡಿವೈಎಸ್ಪಿ ಹಸೈನಾರ್ ಅವರಿಗೆ ವಹಿಸಲಾಗಿದೆ. ಎರಡು ದಿನಗಳಲ್ಲಿ ವರದಿ ನೀಡುವಂತೆ ಅವರಿಗೆ ಸೂಚಿಸಲಾಗಿದೆ.







